Site icon Vistara News

BJP Raitha Morcha: ಫೆ. 12ರಿಂದ ಬಿಜೆಪಿ ರೈತ ಮೋರ್ಚಾದ ‘ಗ್ರಾಮ ಪರಿಕ್ರಮ ಯಾತ್ರೆ’: ಎ.ಎಸ್.ನಡಹಳ್ಳಿ

BJP Leader A.S.Nadahalli Pressmeet

ಬೆಂಗಳೂರು: ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಷ್ಟ್ರದಾದ್ಯಂತ ರೈತ ಮೋರ್ಚಾ (BJP Raitha Morcha) ವತಿಯಿಂದ ‘ಗ್ರಾಮ ಪರಿಕ್ರಮ ಯಾತ್ರೆ’ಯನ್ನು ಫೆಬ್ರವರಿ 12ರಿಂದ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ನಡಹಳ್ಳಿ ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಫೆ. 12ರಂದು ಮಧ್ಯಾಹ್ನ 12.30ಕ್ಕೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಯಾತ್ರೆಯನ್ನು ಉದ್ಘಾಟಿಸುವರು. ದೇಶದ ಎಲ್ಲ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆ ನೆರವೇರಲಿದೆ. ದೇಶದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಎಲ್‍ಇಡಿ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರ ಉದ್ಘಾಟನೆ ಕಾರ್ಯಕ್ರಮದ ಪ್ರಸಾರ ಇರಲಿದೆ. ಅದರ ವೀಕ್ಷಣೆ ನಡೆಯಲಿದೆ ಎಂದರು.

ಇದನ್ನೂ ಓದಿ | PM Narendra Modi: ಪದ್ಮ ಪ್ರಶಸ್ತಿಗಳ ಮೂಲಕ ಮಂಗಳಮುಖಿಯರಿಗೆ ಗೌರವ ನೀಡಿದ್ದೇವೆ ಎಂದ ಪಿಎಂ

ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ್‍ಕುಮಾರ್ ಚಾಹರ್ ಅವರು ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲು ತಿಳಿಸಿದ್ದು, ರಾಜ್ಯದ ನಾಲ್ಕೈದು ನಗರ ಪ್ರದೇಶ ಹೊರತುಪಡಿಸಿ ರಾಜ್ಯದ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ಪದಾಧಿಕಾರಿಗಳು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.

ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲು ಗೋಪೂಜೆ ಮಾಡಲಾಗುವುದು. 30 ದಿನಗಳ ಕಾಲ ಪರಿಕ್ರಮ ಯಾತ್ರೆ ಇರುತ್ತದೆ. ಪ್ರತಿದಿನ ಪ್ರತಿ ಜಿಲ್ಲೆಯ 5 ಹಳ್ಳಿಗಳಿಗೆ ಪ್ರವಾಸ ಮಾಡಲಾಗುವುದು. ರೈತರ ಸಮಸ್ಯೆ ಆಲಿಸುವುದು ಮತ್ತು ಅವರ ಬೇಕು ಬೇಡಗಳನ್ನು ಪಟ್ಟಿ ಮಾಡಿ ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರ ಮುಖಾಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸಲಾಗುವುದು. ಭವಿಷ್ಯದಲ್ಲಿ ನಮ್ಮ ಸರ್ಕಾರದ ಯೋಜನೆ ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆಗಳನ್ನು ಅಳವಡಿಸಿಕೊಳ್ಳುವುದೇ ಯಾತ್ರೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು.

ನರೇಂದ್ರ ಮೋದೀಜಿ ಅವರ ಕೇಂದ್ರ ಸರ್ಕಾರವು ಗ್ರಾಮೀಣ ಜನರಿಗಾಗಿ ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದಾಗ ಜಾರಿಗೊಳಿಸಿದ ರೈತಪರ ಕಾರ್ಯಕ್ರಮಗಳ ಕುರಿತು ಎಲ್ಲ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ ಎಂದು ವಿವರ ನೀಡಿದರು.

ಇದನ್ನೂ ಓದಿ | KS Eshwarappa : ಗುಂಡಿಕ್ಕಿ ಕೊಲ್ಲಿ ಎಂದಿಲ್ಲ, ಕಾನೂನು ಬೇಕು ಅಂದೆ ಅಷ್ಟೆ; ಮೆತ್ತಗಾದ ಈಶ್ವರಪ್ಪ

ರಾಜ್ಯ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ರಾಜ್ಯ ಮಾಧ್ಯಮ ವಕ್ತಾರರಾದ ವೆಂಕಟೇಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version