ಬೆಳಗಾವಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿ ಹೊತ್ತು ಸಾಗುತ್ತಿರುವ ಬಿಜೆಪಿ ರಾಜ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲೂ ಸಂಚರಿಸುವ ಬೃಹತ್ ರಥ ಯಾತ್ರೆಯ ಭಾಗವಾದ “ವಿಜಯ ಸಂಕಲ್ಪ ರಥಯಾತ್ರೆ”ಯ (BJP Rathayatre) ಎರಡನೇ ತಂಡಕ್ಕೆ ಖಾನಾಪುರದ ನಂದಗಡದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಸಿಸಿ ಪಾಟೀಲ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಜತೆಗಿದ್ದರು.
ಇದನ್ನೂ ಓದಿ: BJP Karnataka: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಉನ್ನತ ಸ್ಥಾನ?: ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ
ಕಾಂಗ್ರೆಸ್ ಕಾಲದಲ್ಲಿ ವಿದ್ಯುತ್ತೇ ಇರಲಿಲ್ಲ- ಜೋಶಿ ವ್ಯಂಗ್ಯ
ನಾವು ರಾಯಣ್ಣ ಕ್ಷೆತ್ರದ ಅಭಿವೃದ್ಧಿಗೆ ಹೆಚ್ಚು ಹಣ ಕೊಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಯಣ್ಣ, ಕನಕದಾಸರು ನೆನಪಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ರೇಲ್ವೆ ಸ್ಟೇಷನ್‌ಗೆ ರಾಯಣ್ಣನ ಹೆಸರನ್ನು ಇಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಹೊರಗೆ ಇದ್ದಾಗ ಅಭಿವೃದ್ಧಿ ಕೆಲಸಗಳಾಗಿವೆ. ನಿಮ್ಮ ಕಾಲದಲ್ಲಿ ವಿದ್ಯುತ್ತೇ ಇರಲಿಲ್ಲ. ಈಗ 200 ಯೂನಿಟ್ ಉಚಿತವಾಗಿ ಕೊಡುತ್ತೀರಾ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮೋದಿ ಅವರು 8 ವರ್ಷ ಮುಗಿಸಿ 9 ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗ ದೇಶದಲ್ಲಿ ಎಲ್ಲ ಕಡೆ ವಿದ್ಯುತ್ ಸಿಗುತ್ತಿದೆ. ಕೇಂದ್ರ ಸರ್ಕಾರ ರಾಯಣ್ಣ ಸೈನಿಕ ಶಾಲೆಗೆ ಕೋಟ್ಯಂತರ ಹಣ ಕೊಟ್ಟಿದೆ. ಸಿದ್ದರಾಮಯ್ಯ ಅವರೇ ನೀವು ಭರವಸೆ ಕೊಡುತ್ತೀರಿ. ಆದರೆ ಈಡೇರಿಸುವುದಿಲ್ಲ. ಇರೋದು ಒಂದೇ ಖುರ್ಚಿ ಅನ್ನೋದು ಗೊತ್ತಿಲ್ಲ. ನಿಮ್ಮ ನಿಮ್ಮಲ್ಲೇ ನಾನು ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದೀರಿ ಎಂದು ಜೋಶಿ ವ್ಯಂಗ್ಯವಾಡಿದರು.
ಅಭಿವೃದ್ಧಿ ಎಲ್ಲರ ಕಣ್ಣ ಮುಂದೆ ಇದೆ. ದೇಶದಲ್ಲಿ ಪರಿವರ್ತನೆ ಬಂದಿದೆ. ಆರ್ಥಿಕತೆಯಲ್ಲಿ ದೇಶ ಐದನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. 35 ವರ್ಷಗಳ ಕಾಲ ರಕ್ಷಣಾ ಸಾಮಗ್ರಿ ಖರೀದಿ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಸದ್ಯ ರಾಜನಾಥ್ ಸಿಂಗ್ ಮಿಲಿಟರಿ ಸಾಮಗ್ರಿಗಳನ್ನು ಉತ್ಪಾದನೆ ಮಾಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ದೇಶದಲ್ಲಿ ಪರಿವರ್ತನೆ ಆಗುತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜನತೆ ಆಶೀರ್ವಾದ ಮಾಡಬೇಕು ಎಂದು ಸಚಿವ ಜೋಶಿ ಮನವಿ ಮನವಿ ಮಾಡಿದರು.
ಇದನ್ನೂ ಓದಿ: Siddaramaiah: 500 ರೂಪಾಯಿ ಕೊಟ್ಟು ಸಮಾವೇಶಕ್ಕೆ ಕರೆಸಿ; ಹೆಬ್ಬಾಳ್ಕರ್‌ಗೆ ಸಿದ್ದರಾಮಯ್ಯ ಹೇಳಿದ ವಿಡಿಯೊ ವೈರಲ್
ಬಿಎಸ್‌ವೈ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ
ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಆಗುವ ವಾತಾವರಣ ಇದೆ. ರಾಜ್ಯದ ನಾಲ್ಕು ಕೋಟಿ ಮತದಾರರನ್ನು ಸಂಪರ್ಕಿಸುವ ಕಾರ್ಯ ಈ ವಿಜಯ ಸಂಕಲ್ಪದ ಯಾತ್ರೆಯಿಂದ ಆಗಲಿದೆ. ನಮ್ಮ ವಿಜಯ ಸಂಕಲ್ಪದಿಂದ ಕಾಂಗ್ರೆಸ್‌ನವರ ಪ್ರಜಾಧ್ವನಿ ಉಡುಗಿ ಹೋಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ನಮಗೆ ಸ್ವತಂತ್ರ ಬಂದು 75 ವರ್ಷಗಳಾಗಿವೆ ದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಂಶಾವಳಿ ಉಳಿದಿದೆ. ಅದನ್ನು ಕಿತ್ತು ಹಾಕಬೇಕಿದ್ದು, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹೋರಾಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಕಂಡ ಕನಸನ್ನು ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ದೇಶದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯ ಬಿತ್ತುವ, ದ್ವೇಷದ ರಾಜಕಾರಣ ನಡೆದಿದೆ. ಒಬ್ಬರನ್ನು ಮೇಲೆತ್ತಿ, ಹಲವರನ್ನು ಕೆಳಕ್ಕೆ ತುಳಿಯುವ ಕೆಲಸ ಮಾಡಲಾಗುತ್ತಿದೆ. ಎಲ್ಲ ವರ್ಗಗಳನ್ನು ಮೇಲೆತ್ತಿದರೆ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಆಡಳಿತ ನೀಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಗೆ ಹೋಗಿ ಅವರನ್ನು ಕೇಳಿ ರಾಜ್ಯ, ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Shivaji statue : ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರು
ಒಂದು ಕುಟುಂಬಕ್ಕೆ ಏನು ಬೇಕು ಅದನ್ನು ನರೇಂದ್ರ ಮೋದಿ ಕೊಟ್ಟಿದ್ದಾರೆ. ಹಿಂದುಳಿದ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ನಾವಾಗಿದ್ದೇವೆ. 40 ವರ್ಷದ ಬೇಡಿಕೆ ಇತ್ತು. ಅಹಿಂದ ನಾಯಕ ಎಂದು ಹೇಳುವ ನಿವ್ಯಾಕೆ ಮೀಸಲಾತಿ ಹೆಚ್ಚಿಸಲಿಲ್ಲ. ಆ ಐತಿಹಾಸಿಕ ಕೆಲಸವನ್ನು ನಾನು ಮಾಡಿದ್ದೇನೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತೀರಾ? ಸಾಮಾಜಿಕ ನ್ಯಾಯ ನಿಮ್ಮಲ್ಲಿ ಎಲ್ಲಿದೆ? ನೀವಷ್ಟೇ ಮುಂದೆ ಬಂದಿದ್ದೀರಿ ಎಂದು ಸಿದ್ದರಾಮಯ್ಯ ಅವರ ಮೇಲೆ ಸಿಎಂ ಬೊಮ್ಮಾಯಿ ಹರಿಹಾಯ್ದರು.