ಚಾಮರಾಜನಗರ: ಭಾರತೀಯ ಜನತಾ ಪಕ್ಷದ ʼವಿಜಯ ಸಂಕಲ್ಪ ರಥಯಾತ್ರೆʼಗೆ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ದೊರೆಯಲಿದೆ. ಮಧ್ಯಾಹ್ನ 1:10ಕ್ಕೆ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಲಿದ್ದಾರೆ.
ಯಾತ್ರೆ ಚಾಲನೆಗೂ ಮುನ್ನ ಮಾದೇಶ್ವರನ ದರ್ಶನವನ್ನು ಜೆ.ಪಿ ನಡ್ಡಾ ಪಡೆಯಲಿದ್ದಾರೆ. ನಡ್ಡಾಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಹಲವು ಸಚಿವರು ಸಾಥ್ ನೀಡಲಿದ್ದಾರೆ.
ರಥಯಾತ್ರೆ ಚಾಲನೆ ಬಳಿಕ ಸೋಲಿಗ ಹಾಗು ಬೇಡಗಂಪಣ ಸಮುದಾಯದೊಂದಿಗೆ ಜೆ.ಪಿ.ನಡ್ಡಾ ಸಂವಾದ ನಡೆಸಲಿದ್ದಾರೆ. ಬಳಿಕ 2:15ಕ್ಕೆ ಸಾಲೂರು ಮಠಕ್ಕೆ ಭೇಟಿ ನೀಡಲಿದ್ದಾರೆ. 3:35ಕ್ಕೆ ಹನೂರು ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ನಡೆಯಲಿದೆ. ಬಳಿಕ ಜೆ.ಪಿ.ನಡ್ಡಾ ಹಾಗೂ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪಯಣಿಸಲಿದ್ದಾರೆ.
ನಂತರ ಯಡಿಯೂರಪ್ಪ ಹಾಗೂ ಈಶ್ವರಪ್ಪ ಯಾತ್ರೆ ಮುಂದುವರಿಸಲಿದ್ದು, ಸಂಜೆ 5.30ಕ್ಕೆ ಕೊಳ್ಳೇಗಾಲದಲ್ಲಿ ನಡೆಯುವ ರೋಡ್ ಶೋ ಹಾಗೂ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರಥಯಾತ್ರೆ, ರೋಡ್ ಶೋ, ಸಮಾವೇಶ ನಡೆಯಲಿವೆ. ನಾಳೆ ಚಾಮರಾಜನಗರದಲ್ಲಿ ರೋಡ್ ಶೋ ಹಾಗೂ ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿವೆ.
ಇದನ್ನೂ ಓದಿ: BJP Rathayatre : ಈ ಬಾರಿ 150 ಗುರಿ; ಮಾ.1ರಿಂದ 4 ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ