ಬೆಂಗಳೂರು: ಭಾರತ ಮಾತೆಯನ್ನು ಆರಾಧ್ಯ ದೇವರು ಎಂದು ತಿಳಿದವರು ಬಿಜೆಪಿಯವರು. ದೇಶ ಮೊದಲು ಎಂದು ತಿಳಿದು ಕೆಲಸ ಮಾಡುವವರು ನಾವು. ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾದವರು ನಮ್ಮವರು. ಆದರೆ, ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಇರುವಂತಹ ರಾಷ್ಟ್ರೀಯ ಪಕ್ಷವಾಗಿದೆ. ನಮಗೆ ಮತ್ತು ಕಾಂಗ್ರೆಸ್‌ನವರಿಗೆ ಇರುವ ಒಂದೇ ವ್ಯತ್ಯಾಸವೆಂದರೆ ನಾವು ಭಾರತ್ ಮಾತಾಕಿ ಜೈ ಎಂದು ಹೇಳುತ್ತೇವೆ. ಕಾಂಗ್ರೆಸ್‌ನವರು ಸೋನಿಯಾ ಮಾತಾಕಿ ಜೈ ಎಂದು ಹೇಳುತ್ತಾರೆ. ಹೀಗಾಗಿ ನಮ್ಮ ಅವರ ನಡುವೆ ಇರುವ ವ್ಯತ್ಯಾಸ ಇಷ್ಟೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನವರ ಶ್ರದ್ಧೆ, ಭಕ್ತಿ ಏನಿದ್ದರೂ ಇಟಲಿ ನಾಯಕಿಗೆ ಮಾತ್ರ. ಆದರೆ, ನಮ್ಮ ಶ್ರದ್ಧಾ-ಭಕ್ತಿ ಏನಿದ್ದರೂ ಭಾರತ ಮಾತೆಗೆ. ದೇಶವನ್ನು ಉಳಿಸಿ, ಉಜ್ವಲ ಭವಿಷ್ಯವನ್ನು ಕೊಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಆ ಜವಾಬ್ದಾರಿ ನಮ್ಮೆಲ್ಲ ಕಾರ್ಯಕರ್ತರ ಮೇಲಿದೆ. ದೇಶದ ಭದ್ರತೆ, ಅಖಂಡತೆ, ಸುರಕ್ಷತೆಯ ಜತೆಗೆ ಆರ್ಥಿಕತೆ, ಸಾಮರಸ್ಯವನ್ನು ಬಿಜೆಪಿ ಕಾಪಾಡಲಿದೆ. ಕಡು ಬಡವರೂ ಸಹ ಸಮಾಜದಲ್ಲಿ ಮೇಲೆ ಬರುವಂತೆ ಮಾಡುವಲ್ಲಿ ಬಿಜೆಪಿ ಶ್ರಮ ವಹಿಸುತ್ತಿದೆ. ಈ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನೋಂದಣಿಯಾಗಿರುವ ಸುಮಾರು ೨ ಸಾವಿರಕ್ಕೂ ಹೆಚ್ಚು ಪಕ್ಷಗಳಿವೆ. ನಾವು ಯಾವುದಾದರೂ ಪಕ್ಷದ ಸದಸ್ಯರಾಗಿರಬಹುದಿತ್ತು. ಆದರೆ, ನಾವು ಏಕೆ ಬಿಜೆಪಿ ಸದಸ್ಯರಾಗಿದ್ದೇವೆ? ಅದಕ್ಕೆ ಕಾರಣ ಏನು? ನಾವು ಪಕ್ಷದ ಜವಾಬ್ದಾರಿಯನ್ನು ತೆಗೆದುಕೊಂಡು ಹೆಮ್ಮೆಯಿಂದ ಏಕೆ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ನಾವು ಸ್ಫೂರ್ತಿಯಿಂದ ಕೆಲಸ ಮಾಡಬಹುದಾಗಿದೆ. ಇಡೀ ಜಗತ್ತಿನಲ್ಲಿಯೇ ದೊಡ್ಡ ಪಕ್ಷವೆಂದರೆ ಬಿಜೆಪಿಯಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷಕ್ಕಿಂತ ಹೆಚ್ಚು ಕಾರ್ಯಕರ್ತರನ್ನು ನಾವು ಹೊಂದಿದ್ದೇವೆ. ಇದು ಕೇವಲ ಸಂಖ್ಯೆಯಲ್ಲಿ ಮಾತ್ರ ದೊಡ್ಡದಲ್ಲ, ವಿಚಾರದಲ್ಲಿಯೂ ದೊಡ್ಡದಿದೆ ಎಂದು ಹೇಳಿದರು.
ಇದನ್ನೂ ಓದಿ | Amit Shah | ದೇವನಹಳ್ಳಿಯಲ್ಲಿ ಕೇಂದ್ರೀಯ ಬೇಹುಗಾರಿಕೆ ತರಬೇತಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ
ನಮ್ಮ ನೀತಿ, ಸಿದ್ಧಾಂತ, ನಾಯಕತ್ವ ಹಾಗೂ ಕ್ರಿಯಾಶೀಲ ಸದಸ್ಯತ್ವ ನಮ್ಮ ಪಕ್ಷದಲ್ಲಿರುವುದರಿಂದ ಗೆಲುವು ಸಾಧ್ಯವಾಗುತ್ತಿದೆ. ಭಾರತವನ್ನು ಯಾವ ರೀತಿ ಮುನ್ನಡೆಸಬೇಕು ಎಂಬ ಸ್ಪಷ್ಟತೆ ಇರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನಮಗೆ ಇಂದು ನಾಯಕರಾಗಿದ್ದಾರೆ. ಆದರೆ, ಯುಪಿಎ ಸರ್ಕಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಾವು ನೋಡಿದ್ದೇವೆ. ಆಗ ಭಾರತ ಹಿಂದೆ ಹೋಗುತ್ತಿತ್ತೇ ವಿನಃ ಎಂದೂ ಸಹ ಮುಂದೆ ಬಂದಿದ್ದನ್ನು ನಾವು ನೋಡಲಿಲ್ಲ. ಹಗರಣಗಳೇ ಹೆಚ್ಚಿದ್ದವು, ಭ್ರಷ್ಟಾಚಾರದಿಂದ ದೇಶ ಮತ್ತು ರಾಜ್ಯವನ್ನಾಳಿದ್ದರು. ಆದರೆ, ಈಗ ನಮಗೆ ಮೋದಿಯವರು ಪ್ರಧಾನಿಯಾಗಿದ್ದರಿಂದ ನಮಗೆ ಒಂದು ಸ್ಪಷ್ಟ ದಿಕ್ಸೂಚಿ ಸಿಕ್ಕಿದಂತಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇಂದು ನಮ್ಮ ಬಿಜೆಪಿ ಗೆಲುವಿಗೆ ದೊಡ್ಡ ಶಕ್ತಿಯಾಗಿ ಅಮಿತ್ ಶಾ ಅವರಿದ್ದಾರೆ. ಅವರ ದೃಢ ಸಂಕಲ್ಪವನ್ನು ನಾವು ನೋಡಿದ್ದೇವೆ. ತ್ರಿಬಲ್ ತಲಾಖ್ ಅನ್ನು ಹಿಂಪಡೆಯುವಾಗ ಅವರು ಕೈಗೊಂಡ ದೃಢ ಹೆಜ್ಜೆಯನ್ನು ಇಡೀ ದೇಶ ನೋಡಿದೆ. ಅದೇ ರೀತಿ ಆರ್ಟಿಕಲ್ ೩೭೦ ಅನ್ನು ಕಾಶ್ಮೀರದಲ್ಲಿ ಜಾರಿಗೆ ತಂದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಾಲ ಹೆಚ್ಚು ಮಾಡಿದ್ದ ಸಿದ್ದರಾಮಯ್ಯ
ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದರೂ ಹಿಂದುಳಿಯುವಂತೆ ಮಾಡಿದ್ದು ಕಾಂಗ್ರೆಸ್ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ೫ ವರ್ಷ ಕಾಲ ಆಡಳಿತ ನಡೆಸಿದರೂ ೨ ಲಕ್ಷ ಕೋಟಿ ರೂಪಾಯಿ ಸಾಲವನ್ನು ಮಾಡಿದ್ದರು. ಅವರು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ೧ ಲಕ್ಷ ಕೋಟಿ ಸಾಲ ಇತ್ತು. ಆದರೆ, ಅವರು ಬಂದ ಮೇಲೆ ೨ ಲಕ್ಷ ಕೋಟಿ ರೂಪಾಯಿಗೆ ಸಾಲವನ್ನು ಏರಿಸಿದ್ದರು. ಆಗೇನೂ ಕೋವಿಡ್ ಸಹಿತ ಏನೂ ಇರಲಿಲ್ಲ. ಈಗ ನಮಗೆ ಸಾಲ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಕೋವಿಡ್‌ನಿಂದ ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋಗಿದೆ. ಇಷ್ಟಾದರೂ ಅಭಿವೃದ್ಧಿ ನಿಲ್ಲಬಾರದು ಎಂಬ ಕಾರಣಕ್ಕೆ ನಾವು ಕಷ್ಟಪಟ್ಟು ಅಭಿವೃದ್ಧಿಯನ್ನು ಮಾಡಿದ್ದೇವೆ. ಕೋವಿಡ್ ಅನ್ನು ನಿಯಂತ್ರಣ ಮಾಡುವುದಲ್ಲದೆ, ಆರ್ಥಿಕ ಸಮೀಕರಣವನ್ನೂ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.
ಇದನ್ನೂ ಓದಿ | Video Viral | ಅಯ್ಯಪ್ಪ ಮಾಲಾಧಾರಿ ಮೇಲೆ ಗುರುಸ್ವಾಮಿ ಗರಂ; ಪಾನಮತ್ತ ಮಾಲಾಧಾರಿಗೆ ಕಪಾಳಮೋಕ್ಷ
ಕಳೆದ ವರ್ಷ ನಮ್ಮ ಬಜೆಟ್‌ನಲ್ಲಿ ೭೧ ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆದುಕೊಳ್ಳಬೇಕಿತ್ತು. ಆದರೆ, ನಾನು ಕೇವಲ ೬೧ ಸಾವಿರ ಕೋಟಿ ರೂಪಾಯಿ ಸಾಲದಲ್ಲಿ ಅದನ್ನು ನಿಭಾಯಿಸಿದ್ದೇನೆ. ೧೦ ಸಾವಿರ ಕೋಟಿ ಸಾಲವನ್ನು ಪಡೆಯದೇ ನಿಭಾಯಿಸಿದ್ದೇವೆ. ಕೇಂದ್ರ ಸರ್ಕಾರ ಹತ್ತು ಹಲವಾರು ಯೋಜನೆಗಳಿದ್ದು, ೬ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಇಂದು ಮಾಡಿದ್ದೇವೆ. ಜಲಜೀವನ್ ಮಿಷನ್ ಅನ್ನು ಮಾಡಿ ಪ್ರತಿ ಮನೆಗೆ ಕುಡಿಯುವ ನೀರನ್ನು ನಮ್ಮ ಕೇಂದ್ರ ಸರ್ಕಾರ ಮಾಡಿದೆ. ಸ್ವಾತಂತ್ರ್ಯ ಬಂದು ೭೫ ವರ್ಷವಾದರೂ ಯಾವುದೇ ಒಬ್ಬ ಪ್ರಧಾನ ಮಂತ್ರಿ ಪ್ರತಿ ಮನೆಗೆ ಕುಡಿಯುವ ನೀರನ್ನು ತಲುಪಿಸುತ್ತೇನೆ ಎಂದು ಹೇಳುವ ಸಾಹಸವನ್ನು ಮಾಡಿರಲಿಲ್ಲ. ಆದರೆ, ಆ ಕೆಲಸವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಕಳೆದ ೨ ವರ್ಷದಲ್ಲಿ 8 ಕೋಟಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ೭೫ ವರ್ಷದಲ್ಲಿ ೨೫ ಲಕ್ಷ ಮನೆಗಳಿಗೆ ಮಾತ್ರ ನೀರು ಕೊಡಲಾಗಿತ್ತು. ಆದರೆ, ಕಳೆದೆರಡು ವರ್ಷದಲ್ಲಿ ೩೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಿದ್ದೇವೆ. ಈ ವರ್ಷ ೨೫ ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಿದ್ದೇವೆ. ಈಗಾಗಲೇ ೧೪ ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ೫ ವರ್ಷ ಹಾಗೂ ಸಮ್ಮಿಶ್ರ ಸರ್ಕಾರ ಒಂದೂವರೆ ವರ್ಷ ಅಧಿಕಾರ ನಡೆಸಿ ಭ್ರಷ್ಟಾಚಾರವನ್ನೇ ಮಾಡಿತ್ತು. ನಾವು ಅದನ್ನೆಲ್ಲವನ್ನೂ ಸ್ವಚ್ಛ ಮಾಡುತ್ತಿರುವುದರಿಂದ ಹತಾಶರಾಗಿ ನಮ್ಮ ಮೇಲೆ ಮಾತನಾಡುತ್ತಿದ್ದಾರೆ. ಸರಿಯಾದ ಪುರಾವೆ ಕೊಡಿ ನಾವು ಸಿದ್ಧರಿದ್ದೇವೆ, ತನಿಖೆಯನ್ನು ಮಾಡಿಸೋಣ ಎಂದು ನಾನು ಹೇಳಿದೆ. ಆದರೆ, ಇದುವರೆಗೂ ಯಾರೂ ಮುಂದೆ ಬಂದಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ೫೯ ಕೇಸ್‌ಗಳು ಎಸಿಬಿಗೆ ಹೋಗಿತ್ತು. ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟರು. ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಎಸಿಬಿಯನ್ನು ಸೃಷ್ಟಿ ಮಾಡಿ, ಲೋಕಾಯುಕ್ತವನ್ನು ಮುಚ್ಚಿದರು. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ತಮ್ಮ ಹಗರಣಗಳು ಗೊತ್ತಾಗುತ್ತದೆ ಎಂಬ ಭಯದಲ್ಲಿಯೇ ಲೋಕಾಯುಕ್ತವನ್ನು ಮುಚ್ಚಿದರು ಎಂದು ಸಿಎಂ ಬೊಮ್ಮಾಯಿ ಆರೋಪ ಮಾಡಿದರು.