ಬೆಂ.ಗ್ರಾಮಾಂತರ: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಡಿಸೆಂಬರ್ 18ರಂದು ಬೆಳಗ್ಗೆ ೧೦.೩೦ಕ್ಕೆ “ರಾಜ್ಯ ಪ್ರಕೋಷ್ಠಗಳ ಸಮಾವೇಶ; ಕ್ರಿಯಾಶೀಲ ಕಾರ್ಯಕರ್ತರ ಶಕ್ತಿಸಂಗಮ” ಕಾರ್ಯಕ್ರಮ (BJP Shakti Sangama) ಆಯೋಜಿಸಲಾಗಿದೆ ಎಂದು ಬಿಜೆಪಿ ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಂಚಾಲಕ ಮತ್ತು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ದೇವನಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸಂರಚನೆಗೊಂಡಿರುವ ಒಟ್ಟು 24 ಪ್ರಕೋಷ್ಠಗಳ ಮೂಲಕ ಸಂಪರ್ಕಕ್ಕೆ ಬಂದು, ವಿವಿಧ ಹಂತಗಳಲ್ಲಿ ಜವಾಬ್ದಾರಿ ಸ್ವೀಕರಿಸಿ, ಮಂಡಲ, ಜಿಲ್ಲಾ ಮತ್ತು ರಾಜ್ಯ ಸ್ತರದಲ್ಲಿ ಸಂಚಾಲಕ, ಸಹ ಸಂಚಾಲಕ, ಸಮಿತಿ ಸದಸ್ಯರಾಗಿ, ಸಂಕುಲ ಪ್ರಮುಖರಾಗಿ ಜವಾಬ್ದಾರಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಕಾರ್ಯಕರ್ತರು ಅಂದರೆ ಸುಮಾರು 25,305 ಸಾವಿರ ಪದಾಧಿಕಾರಿಗಳು ಅಂದಿನ ಸಮಾವೇಶಕ್ಕೆ ಅಪೇಕ್ಷಿತರು ಎಂಬುವುದು ವಿಶೇಷ. ಹಾಗೆಯೇ 16,000 ದಿಂದ 18,000 ಸಾವಿರ ಜವಾಬ್ದಾರಿ…ನಿರತ ಕಾರ್ಯಕರ್ತರು ಅಂದಿನ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಬಿಜೆಪಿ ಹೊರತುಪಡಿಸಿ ಬಹುಶಃ ದೇಶದ ಯಾವುದೇ ರಾಜಕೀಯ ಪಕ್ಷಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ನಿರ್ದಿಷ್ಟ ವೃತ್ತಿ ಸಮುದಾಯಗಳಿಗೆ ವ್ಯವಸ್ಥಿತವಾಗಿ ಕೊಂಡೊಯ್ದಿಲ್ಲ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬಹುದು. ಉದಾಹರಣೆಗೆ, ಹಾಲು ಉತ್ಪಾದಕರ ಪ್ರಕೋಷ್ಠ, ಅಸಂಘಟಿತ ಕಾರ್ಮಿಕರ ಪ್ರಕೋಷ್ಠ, ಸಹಕಾರ ಪ್ರಕೋಷ್ಠ, ಫಲಾನುಭವಿಗಳ ಪ್ರಕೋಷ್ಠದಂತಹ ಮುಂತಾದ ವಲಯಗಳ ಜನರಿಗೆ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಂತಹ ಮತ್ತು ಆಯಾ ಸಮುದಾಯಗಳನ್ನು ಮತಗಳನ್ನಾಗಿ ಪರಿವರ್ತಿಸಬಲ್ಲಂತ ಸಾಮರ್ಥ್ಯ ಪ್ರಕೋಷ್ಠಗಳಿಗಿದ್ದು, ಯಾವುದೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತದೆಂಬುದನ್ನು ಅಲ್ಲಗಳೆಯಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಯಾ ಪ್ರಕೋಷ್ಠಗಳ ಕಾರ್ಯವ್ಯಾಪ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು, ತಜ್ಞರನ್ನೂ ಆಹ್ವಾನಿಸುತ್ತಿರುವುದು ಈ ಸಮಾವೇಶದ ಮತ್ತೊಂದು ವಿಶೇಷತೆ. ಸಂಖ್ಯಾತ್ಮಕವಾಗಿ-ಗುಣಾತ್ಮಕವಾಗಿ ಈ ಸಮಾವೇಶ ನಮಗೆಲ್ಲ ಹೊಸ ಪ್ರೇರಣೆ, ಉತ್ಸಾಹ, ಬದ್ಧತೆ ಹಾಗೂ ಬಿಜೆಪಿ ಅಭ್ಯರ್ಥಿಗಳು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲು ಮತದಾರರ ಬೆಂಬಲ ಗಳಿಸಲು ಶಕ್ತಿ, ಯುಕ್ತಿ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಹಾಲು ಉತ್ಪಾದಕರ ಪ್ರಕೋಷ್ಠ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಎಸ್.ಕೆ.ರವಿಕುಮಾರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.
ಇದನ್ನೂ ಓದಿ | Karnataka Election | ತುಮಕೂರಲ್ಲಿ ಮತಬೇಟೆಗೆ ಶುರುವಾಯ್ತು ಆಣೆ ಪ್ರಮಾಣ; ಬಸ್‌ನಲ್ಲಿ ಕರೆದೊಯ್ದಿದ್ದ ಜೆಡಿಎಸ್ ಅಭ್ಯರ್ಥಿ