ಉತ್ತರ ಕನ್ನಡ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ರಂಗೇರುತ್ತಿದ್ದು, ಆಂತರಿಕ ಬಿಕ್ಕಟ್ಟಿನ ಹೊರತಾಗಿಯೂ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಾಯಕರು ಪರಸ್ಪರ ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, “ಬಿಜೆಪಿಗೆ ಭದ್ರ ಬುನಾದಿ ಹಾಕಿದವರು, ನಮ್ಮ ಪಕ್ಷದ ವಿರುದ್ಧ ಹೋರಾಡಿದವರೇ ಇಂದು ಮೂಲೆಗುಂಪಾಗಿದ್ದಾರೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ವ್ಯಂಗ್ಯ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನಾಗಿ ಹೊಸಬರಿಗೆ ಟಿಕೆಟ್ ನೀಡುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಜೆಡಿಎಸ್‌ನವರು ಆರಂಭದಲ್ಲೇ ಎಡವಿದ್ದಾರೆ. ಆ ಪಕ್ಷದಲ್ಲಿ ಜಾತ್ಯತೀತ ತತ್ವವೇ ಇಲ್ಲದಂತಾಗಿದೆ. ಕುಟುಂಬದ ಸದಸ್ಯರನ್ನೇ ಬೇರೆ ಪಕ್ಷದಿಂದ ಕಣಕ್ಕಿಳಿಸಿದ ಮೇಲೆ ಜೆಡಿಎಸ್ ಬಗ್ಗೆ ಏನು ಹೇಳೋದು? ಇನ್ನು ಬಿಜೆಪಿಯಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಹೇಳುವ ಅಗತ್ಯವಿಲ್ಲ. ಅಲ್ಲಿ ಪಕ್ಷದ ಮಾಜಿ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ಇಲ್ಲವಾಗಿದೆ. ಪಕ್ಷಕ್ಕೆ ಭದ್ರ ಬುನಾದಿ ಹಾಕಿದವರಿಗೆ, ರಾಜ್ಯ ಪ್ರವಾಸ ಮಾಡಿದವರಿಗೆ, ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಮನೆಗೆ ಕಳಿಸಿ ಹೊಸಬರನ್ನು ಕಣಕ್ಕಿಳಿಸಿದ್ದಾರೆ” ಎಂದು ಕುಟುಕಿದರು.
ಡಿಕೆಶಿ ಸಿಎಂ ಆಗಲಿ ಎಂದು ಪೂಜೆ
ದೇವಾಲಯದ ಅರ್ಚಕರು ತಾವು ಸಿಎಂ ಆಗಬೇಕು ಎಂದು ಪೂಜೆ ಮಾಡಿದ್ದಾರೆ ಎಂದು ಕೇಳಿದಾಗ, “ಅರ್ಚಕರು ಕೇಳುವುದರಲ್ಲಿ ತಪ್ಪೇನಿದೆ. ಅವರ ಆಸೆ ಅವರು ಕೇಳಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಳಗೆ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನೇ ಆಸೆ ಪಟ್ಟರೂ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿದೆ. ಈಗ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ ರಾಜ್ಯ ಪ್ರಗತಿ ಸಾಧಿಸಲಿ ಎಂಬುದು ನಮ್ಮ ಆಸೆ. ನಮ್ಮ ಅಭಿಮಾನಿಗಳು ಕೇಳಿದಾಗ ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಐಟಿ, ಇ.ಡಿ ದಾಳಿ ಕುರಿತು ಪ್ರತಿಕ್ರಿಯೆ
ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದವರ ವಿರುದ್ಧ ಐಟಿ, ಇ.ಡಿ, ಸಿಬಿಐ ದಾಳಿ ಬಗ್ಗೆ ಕೇಳಿದಾಗ, “ಇದು ಚುನಾವಣೆ ಸಮಯ. ಪ್ರಕೃತಿ ನಿಯಮ ಹಾಗೂ ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಅದು , ಡಿ.ಕೆ.ಶಿವಕುಮಾರ್ ಇರಬಹುದು, ಕೇಜ್ರಿವಾಲ್ ಪ್ರಕರಣ ಇರಬಹುದು. ದೇಶದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಜನರೇ ಇದಕ್ಕೆಲ್ಲ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
ಪಕ್ಷ ಸಂಘಟನೆಗೆ ಇಲ್ಲಿನ ಕಾರ್ಯಕರ್ತರಿಗೆ ಏನು ಸೂಚನೆ ನೀಡಿದ್ದೀರಿ ಎಂದು ಕೇಳಿದಾಗ, “ಇಲ್ಲಿ ಹಿಂದುತ್ವ ಹಾಗೂ ರಾಮ ಮಂದಿರ, ಬಿಜೆಪಿ ಅಲೆ ಇಲ್ಲ. ಹೀಗಾಗಿ ಬಿಜೆಪಿ ಗ್ಯಾರಂಟಿ ಎಂದು ಹೇಳುವ ಬದಲು ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ” ಎಂದು ಕುಟುಕಿದರು. ಬಿಜೆಪಿ ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ನೀಡದೆ ಎಲ್ಲರನ್ನು ಸಮಾನವಾಗಿ ನೋಡುವ ಸಂದೇಶ ಸಾರುತ್ತಿದ್ದಾರಾ ಎಂಬ ಪ್ರಶ್ನೆಗೆ, “ಅವರ ಸಂದೇಶ ಏನೂ ಇಲ್ಲ, ಸಮಾನತೆಯೂ ಇಲ್ಲ. ಹೋರಾಟ ಮಾಡಿದವರಿಗೆ ವಿಶ್ರಾಂತಿ ಪಡೆಯಿರಿ ಎಂದು ಮನೆಯಲ್ಲಿ ಕೂರಿಸಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: Vistara News Polling Booth: ಕಲಬುರಗಿಯಲ್ಲಿ ಅಚ್ಚರಿ ಫಲಿತಾಂಶ; ಕಾಂಗ್ರೆಸ್ ಮೇಲುಗೈ!
ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ವಿರೋಧವಿದೆ ಎಂಬ ಪ್ರಶ್ನೆಗೆ, “ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಯಾರನ್ನೂ ವಿರೋಧ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ತೀರ್ಮಾನದ ವಿರುದ್ಧ ಆಂತರಿಕವಾಗಿ ಹಾಗೂ ಬಹಿರಂಗವಾಗಿ ವಿರೋಧಿಸುವಂತಿಲ್ಲ” ಎಂದು ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ