ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಕ್ರಮ, ರಾಜಕೀಯ ಕಾರ್ಯಕ್ರಮಕ್ಕೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳ ಬಳಕೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ, ಕಾನೂನು-ಸುವ್ಯವಸ್ಥೆ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಶನಿವಾರ ಪ್ರತಿಭಟನೆ (BJP Protest) ನಡೆಸಲಾಯಿತು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಬೆಂಗಳೂರು ಮಹಾನಗರ ವತಿಯಿಂದ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಮುಖಂಡ ಬಾಸ್ಕರ್ ರಾವ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್. ಆರ್. ರಮೇಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಮಾಜಿ ಎಂಎಲ್‌ಸಿ ಅಶ್ವತ್ಥ ನಾರಾಯಣ, ಮಖಂಡ ಸಪ್ತಗಿರಿಗೌಡ, ಮಾಜಿ ಕಾರ್ಪೊರೇಟರ್‌ಗಳಾದ ಎಸ್. ಹರೀಶ್, ಉಮೇಶ್ ಶೆಟ್ಟಿ, ಮಂಜುನಾಥ್ ಸೇರಿ ಹಲವರು ಭಾಗಿಯಾಗಿದ್ದರು.
ಶಾಸಕ, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಈ ಸರ್ಕಾರದಲ್ಲಿ ಸಮಾಜ ವಿರೋಧಿ ಶಕ್ತಿಗಳು ತಲೆ ಎತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಟಿ.ನರಸೀಪುರದಲ್ಲಿ ಸಮಾಜ ದ್ರೋಹಿಗಳು ವೇಣುಗೋಪಾಲ ನಾಯಕ್‌ನನ್ನು ಕೊಲೆ ಮಾಡಿದ್ದಾರೆ. ಹಲವು ಕಡೆ ಇಂತಹ ಕೃತ್ಯಗಳು ನಡೆಯುತ್ತಿವೆ. ಸಚಿವ ಮಹದೇವಪ್ಪ ಪುತ್ರನ ಹಿಂಬಾಲಕರು ಇಂತಹ ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ | Vishweshwar Bhat: ಪುಸ್ತಕ ಬಿಡುಗಡೆಗೆ ಬಾರದ ಸಿದ್ದರಾಮಯ್ಯ! ʼಅನಿವಾರ್ಯತೆʼ ಎಲ್ಲರಿಗೂ ಅರ್ಥವಾಗ್ತದೆ ಎಂದ ವಿಶ್ವೇಶ್ವರ ಭಟ್
ಟಿ.ನರಸೀಪುರದಲ್ಲಿ ಮರಳು ದಂಧೆಗಾಗಿ ದುಷ್ಕೃತ್ಯಗಳು ನಡೆಯುತ್ತಿವೆ. ಕಲಬುರ್ಗಿಯಲ್ಲಿ ಮರಳು ದಂಧೆಗೆ ಪೊಲೀಸ್ ಬಲಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರ ಹಾಲಿನ ದರ ಹೆಚ್ಚು ಮಾಡಿದೆ. ಪ್ರತಿಯೊಂದು ವಸ್ತುವಿನ ದರವನ್ನೂ ಏರಿಸಿದೆ. ಆಸ್ತಿ ಮಾರ್ಗಸೂಚಿ ದರ, ವಾಹನ ನೋಂದಣಿ ತೆರಿಗೆ, ಅಬಕಾರಿ, ವಿದ್ಯುತ್ ಹೀಗೆ ಎಲ್ಲದರ ದರ ಹೆಚ್ಚಿಸಲಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದ್ದು, ಹರಾಜಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದರು.
ಎಂಎಲ್‌ಸಿ ಎನ್. ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ದಲಿತ ಪ್ರೀತಿ ಎನ್ನುತ್ತಾರೆ. ಅವರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿ ಇದ್ದರೆ, ಜಿ.ಪರಮೇಶ್ವರ ಅಥವಾ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಪೋಸ್ಟ್ ಬಿಟ್ಟುಕೊಡಲಿ ನೋಡೋಣ. ಸಿದ್ದರಾಮಯ್ಯ ಬಡವರ ವಿರೋಧಿಯಾಗಿದ್ದಾರೆ. ಮನೆ ಯಜಮಾನನಿಗೆ ನಾವು ಬೇರೆ ಬೇರೆ ರೂಪದಲ್ಲಿ 2000 ಸಾವಿರ ರೂಪಾಯಿ ಕೊಡುತ್ತಿದ್ದೆವು. ಆದರೆ, ಇವರು ಮನೆ ಒಡೆಯುವ ಕೆಲಸ ಮಾಡಿದರು. ಸಿದ್ದರಾಮಯ್ಯ ನಾನೇ ಸೂರ್ಯ ಎಂದುಕೊಂಡಿದ್ದಾರೆ. ನೀವು ಸೂರ್ಯ ಅಲ್ಲ, ಕತ್ತಲು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಎಂಎಲ್‌ಸಿ ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಕೊಲೆ ಪ್ರಕರಣದಲ್ಲಿ ಸುನೀಲ್ ಬೋಸ್ ಬೆಂಬಲಿಗರ ಕೈವಾಡ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ
ಕೋಲಾರ: ನಗರದ ಪಲ್ಲವಿ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಕಾರ್ಯಕರ್ತರು ಸಂಚಾರ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಭಯೋತ್ಪಾದಕರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿದೆ. ರಾಜ್ಯದಲ್ಲಿ ಗೂಂಡಾ ಸರ್ಕಾರ ಜಾರಿಯಲ್ಲಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಪ್ರತಿಕೃತಿ ದಹಿಸಿದ ಬಳಿಕ ಸಿದ್ದರಾಮುಲ್ಲಾಖಾನ್ ಎಂದು ವ್ಯಂಗ್ಯವಾಗಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಹಾಸನದಲ್ಲಿ ಕಾಂಗ್ರೆಸ್ ಆಡಳಿತ ನೀತಿ ವಿರೋಧಿಸಿ ಹೋರಾಟ
ಹಾಸನ: ಕಾಂಗ್ರೆಸ್ ಆಡಳಿತ ನೀತಿ ವಿರೋಧಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಹಿಂದುಗಳನ್ನು ಗುರಿಯಾಗಿಸಿ ದ್ವೇಷದ ಆಡಳಿತ ನಡೆಸಲಾಗುತ್ತಿದ್ದು, ಅಲ್ಪಸಂಖ್ಯಾತರನ್ನ ಓಲೈಸಲಾಗುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಂತರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಮಡಿಕೇರಿಯಲ್ಲಿ ಪ್ರತಿಭಟನೆ
ಮಡಿಕೇರಿ: ಬಿಜೆಪಿಯ ಹತ್ತು ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಶಾಸಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆಂದು ಕಿಡಿ ಕಾರಿದ ಕಾರ್ಯಕರ್ತರು, ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಘೋಷಣೆ ಕೂಗಿದರು.
ಇಂತಹ ಸ್ಪೀಕರ್‌ರನ್ನು ಎಂದೂ ಕಂಡಿಲ್ಲ: ಆರಗ ಜ್ಞಾನೇಂದ್ರ
ಶಿವಮೊಗ್ಗ: ರಾಜ್ಯ ಸರ್ಕಾರ, ವಿಧಾನಸಭೆ ಸ್ಪೀಕರ್ ನಡೆ ಖಂಡಿಸಿ ನಗರದ ಹುಲಿಕೆರೆ ಶಾಂತಪ್ಪ ವೃತ್ತದ ಶಿವಪ್ಪ ನಾಯಕ ಪ್ರತಿಮೆ ಎದುರು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ ಶಾಸಕರಾದ ಚನ್ನಬಸಪ್ಪ, ಡಿ.ಎಸ್.ಅರುಣ್, ಮಾಜಿ ಎಂಎಲ್‌ಸಿ ಆರ್.ಕೆ. ಸಿದ್ರಾಮಣ್ಣ ಮತ್ತಿತರರು ಭಾಗಿಯಾಗಿದ್ದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಾನು ನೆನ್ನೆಯವರೆಗೆ ಅಮಾನತಿನಲ್ಲಿ ಇದ್ದೆ. 20 ವರ್ಷ ಶಾಸನಸಭೆಯಲ್ಲಿ ಇದ್ದವನು ನಾನು. ಇಂತಹ ಸ್ಪೀಕರ್ ಅವರನ್ನು ಎಂದೂ ನೋಡಿರಲಿಲ್ಲ. ಹಳೆಯ ಸ್ಪೀಕರ್‌ಗಳು, ಯು.ಟಿ. ಖಾದರ್‌ಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರಿಗೆ ವಿರೋಧ ಪಕ್ಷಗಳ ಮುಖಂಡರು ಬಂದಿದ್ದರು. ಅವರಲ್ಲಿ ಹಲವರು ಬೇಲ್‌ನಲ್ಲಿ ಹೊರಗೆ ಇರುವವರು. ಅವರಿಗೆ ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ಕಳುಹಿಸಿದ್ದರು. ಇದರಲ್ಲಿ ಲೋಪ ಆಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಖಂಡಿಸಿದ್ದಾರೆ. ಐಎಎಸ್ ಅಧಿಕಾರಿಗಳು ಇಡೀ ವ್ಯವಸ್ಥೆ ನೋಡಿಕೊಳ್ಳುವವರು. ಅವರಿಗೆ ಅವರದ್ದೇ ಆದ ನೀತಿ ನಿಯಮ ಇದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | BK Hariprasad: ಈಡಿಗ- ಬಿಲ್ಲವರ ಕಡೆಗಣನೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಸ್ವಾಮೀಜಿ ಆಕ್ರೋಶ, ಹರಿಪ್ರಸಾದ್ ಪರ ಬ್ಯಾಟಿಂಗ್
ಸಿದ್ದರಾಮಯ್ಯ ಅವರು ಸದನದ ಬಾಗಿಲನ್ನು ಕಾಲಿನಿಂದ ಒದ್ದಿದ್ದರು. ಅವರು ಮಾಡಿದ ಕೃತ್ಯಕ್ಕೆ ವಿಧಾನಸೌಧದ ಒಳಗೆ ಬಿಡಬಾರದಿತ್ತು. ಧರ್ಮೇಗೌಡರನ್ನು ಸ್ಪೀಕರ್ ಕುರ್ಚಿಯಿಂದ ಎಳೆದು ಹಾಕಿದ್ದಾರೆ. ಅವರು ಕೊರಗಿ ಆತ್ಮಹತ್ಯೆ ಮಾಡಿಕೊಂಡರು. ಮೈಕ್ ಎಸೆದ ಪ್ರಕರಣ ನಡೆದಿದೆ, ಸ್ಪೀಕರ್ ಇವೆಲ್ಲವನ್ನೂ ನಿಭಾಯಿಸುವ ಚಾಕಚಕ್ಯತೆ ಹೊಂದಿರಬೇಕು ಎಂದರು.
ಸಿದ್ದರಾಮಯ್ಯ ಮಹಾ ಅರ್ಥ ಶಾಸ್ತ್ರಜ್ಞ. ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದೇನು, ಗ್ಯಾರಂಟಿ ಯೋಜನೆ ಭ್ರಷ್ಟಾಚಾರದ ಇನ್ನೊಂದು ಮುಖ. ತಮ್ಮ ಹಿಂದಿನ ಆಡಳಿತಾವಧಿಯ ಸಾಧನೆ ಮೇಲೆ ಅವರು ಚುನಾವಣೆಗೆ ಹೋಗಬೇಕಿತ್ತು. ಈಗಾಗಲೇ ವರ್ಗಾವಣೆ ದಂಧೆ ಆರಂಭವಾಗಿದೆ. ಕಾಮಗಾರಿಯ ಮಾಹಿತಿ ಮೊದಲು ಸಚಿವರಿಗೆ ಕೊಡಬೇಕಂತೆ. ಇಂತಹ ವ್ಯವಸ್ಥೆ ಯಾವತ್ತೂ ಇರಲಿಲ್ಲ, ಅಧಿಕಾರಿಗಳಿಗೆ ಬೆಲೆ ಇಲ್ಲವೇ ಎಂದು ಆಕ್ರೋಶ ಹೊರಹಾಕಿದರು.