ಬೆಂಗಳೂರು: ಎಸ್‌ಸಿ-ಎಸ್‌ಟಿ ಜನಾಂಗಕ್ಕಿರುವ ಯೋಜನೆಗಳ ಅನುದಾನ ಕಡಿತ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. 5 ಗ್ಯಾರಂಟಿಗಳ (Congress Guarantee) ಹೆಸರಿನಲ್ಲಿ 75 ಸಾವಿರ ಕೋಟಿ ರೂ.ಗಳನ್ನು ಜನರಿಂದ ರಾಜ್ಯ ಸರ್ಕಾರ ಸುಲಿಗೆ ಮಾಡುವ ಮೂಲಕ ದಲಿತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಗೆ 50 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಈಗಾಗಲೇ ಜುಲೈ ತಿಂಗಳು ಮುಗಿದಿದೆ. 50 ಸಾವಿರ ಕೋಟಿ ರೂ. ಜನರಿಗೆ ಕೊಡುವ ಬದಲಿಗೆ 75 ಸಾವಿರ ಕೋಟಿ ರೂ. ಟೋಪಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಂತಹ ಮೋಸದಾಟ ಖಂಡನೀಯ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka politics : ಕೈ ಹೈಕಮಾಂಡ್‌ಗೆ ಸರ್ಕಾರದ ವರ್ಗಾವಣೆ ದಂಧೆ ರಿಪೋರ್ಟ್ ಕೊಟ್ಟ ಬಿ.ಕೆ. ಹರಿಪ್ರಸಾದ್!
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆನ್ನೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನ ಸಂಬಂಧಿತ ಸಭೆ ಮಾಡಿ, ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂ. ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಹೀಗಾದರೆ ದೀನದಲಿತರು, ಬಡವರು, ಶಿಕ್ಷಣ ವಂಚಿತರು, ನಿರುದ್ಯೋಗಿಗಳ ಸ್ಥಿತಿ ಏನಾಗಬೇಕು ಎಂದು ತಿಳಿಸಿದರು.
ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಅನುದಾನದಲ್ಲಿ ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉದ್ಯೋಗ ನೀಡಿಕೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಅನುದಾನ ಕೊಡಬೇಕೆಂಬುದೇ ಸಂವಿಧಾನದ ಆಶಯ. ನಮ್ಮ ಸರ್ಕಾರ ಇದ್ದಾಗ ಹಿಂದೆಯೂ ಗಂಗಾ ಕಲ್ಯಾಣ ಯೋಜನೆ, ಭೂಮಿ ಖರೀದಿ, ಮನೆಗಳ ನಿರ್ಮಾಣ, ಹಾಸ್ಟೆಲ್‍ಗಳು, ವಸತಿಶಾಲೆ ನಿರ್ಮಿಸಲು ಅನುದಾನ ನೀಡಿದ್ದೇವೆ. ಈ ಸರ್ಕಾರ ಹಾಸ್ಟೆಲ್ ನಿರ್ಮಾಣ, ವಸತಿ ಶಾಲೆ ನಿರ್ಮಾಣಕ್ಕೆ ಒಂದೇ ಒಂದು ರೂಪಾಯಿ ಇಟ್ಟಿಲ್ಲ ಎಂದು ಟೀಕಿಸಿದರು.
ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ. 24 ಅನುದಾನ ಕೊಡುವ ಶ್ರೇಷ್ಠ ಕೆಲಸ ಮಾಡಿದ್ದಾಗಿ ಸಿದ್ದರಾಮಯ್ಯನವರು ಎದೆ ಬಡಿದುಕೊಳ್ಳುತ್ತಿದ್ದರು. ಆದರೆ, ಈಗ ಅವರು ಮಾಡಿರುವುದಾರೂ ಏನು? 156 ವಸತಿ ಶಾಲೆಯ ಕಟ್ಟಡದ ಕಾಮಗಾರಿ ಕಳೆದ 3 ತಿಂಗಳಿನಿಂದ ನಿಲ್ಲಿಸಿದ್ದಾರೆ. 75 ಹಾಸ್ಟೆಲ್‍ಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. 108 ವಸತಿ ಶಾಲೆಗಳಿಗೆ ಪ್ರತಿ ಶಾಲೆಗೆ 10 ಎಕರೆಯಷ್ಟು ಭೂಮಿಯನ್ನು ನಾವು ನೀಡಿದ್ದೆವು. ಅವುಗಳಿಗೆ ಹಣ ಮಂಜೂರು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಮಹದೇವಪ್ಪ ಸುಮ್ಮನೆ ರಾಜಕೀಯಕ್ಕೆ ಬಂದವರಲ್ಲ. ಅವರಿಗೆ ದಲಿತ ಸಂಘರ್ಷ ಸಮಿತಿ ಹೋರಾಟದ ಹಿನ್ನೆಲೆ ಇದೆ. ಅವರು ಯಾವುದೇ ಕಾರಣಕ್ಕೂ ಅನುದಾನ ಹೊಂದಾಣಿಕೆಯನ್ನು ಒಪ್ಪಬಾರದು ಎಂದು ಆಗ್ರಹಿಸಿದರು.
ಎಸ್‍ಸಿ, ಎಸ್‍ಟಿ ಜನಾಂಗ ಕಡೆಗಣಿಸಿದರೆ ಹೋರಾಟ
ಬಡವರ ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡಲು ಹಾಸ್ಟೆಲ್ ನಿರ್ಮಿಸಿಕೊಡಿ, ವಸತಿ ಶಾಲೆಗಳನ್ನು ಪೂರ್ಣಗೊಳಿಸಿ ಬಡವರ ಮಕ್ಕಳಿಗೆ ಅವಕಾಶ ನೀಡಿ. ಹಾಸ್ಟೆಲ್‍ನಲ್ಲಿ ಒಂದು ಕೊಠಡಿಯಲ್ಲಿ 20ರಿಂದ 30 ಹುಡುಗರನ್ನು ಕುರಿ ತುಂಬಿಸಿದಂತೆ ತುಂಬಿಸಿ ಓದಿಸಲು ಸಾಧ್ಯವಿಲ್ಲ. ಅವರಿಗೆ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ. 11 ಸಾವಿರ ಕೋಟಿ ಪೈಕಿ 2,500 ಕೋಟಿಯನ್ನು ಹಾಸ್ಟೆಲ್ ಮತ್ತು ವಸತಿ ಶಾಲೆಗೆ ಕೊಡಬೇಕು ಎಂದು ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
ಭೂಮಿ ಖರೀದಿಗೆ 2,500 ಕೋಟಿರೂ. , ಗಂಗಾಕಲ್ಯಾಣ ಯೋಜನೆಗೆ 1 ಸಾವಿರ ಕೋಟಿ ರೂ. ಕೊಡಬೇಕು ಎಂದು ಒತ್ತಾಯಿಸಿದ ಅವರು, ಬಸ್ಸಿನಲ್ಲಿ ಪುಕ್ಕಟೆ ಪ್ರಯಾಣ, ಉಚಿತ ವಿದ್ಯುತ್ ನೀಡಿದ್ದಾಗಿ ಹೇಳಿಕೊಂಡು, ಅದನ್ನೆಲ್ಲ ಎಸ್‍ಸಿ, ಎಸ್‍ಟಿ ಖಾತೆಗೆ ಹಾಕುವುದು ಮೋಸದಾಟ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್.ರವಿಕುಮಾರ್ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟ ಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂ ಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರ್ಕಾರ ಹಾಕುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸುಮಾರು 50 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಬೃಹತ್ ಯೋಜನೆಯನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಇದು ಕೊಡುವ ಸರ್ಕಾರ ಅಲ್ಲ- ಕಿತ್ತುಕೊಳ್ಳುವ ಸರ್ಕಾರ ಎಂದು ಕಿಡಿಕಾರಿದರು.
ಇದನ್ನೂ ಓದಿ | Nandini Ghee : ತಿರುಪತಿ ಲಡ್ಡಿನಲ್ಲಿ ತುಪ್ಪ ಇಲ್ಲ; ಕಾಂಗ್ರೆಸ್- ಬಿಜೆಪಿ ಆರೋಪ-ಪ್ರತ್ಯಾರೋಪಕ್ಕೆ ಕೊನೆ ಇಲ್ಲ
11 ಸಾವಿರ ಕೋಟಿ ಬೇರೆಡೆಗೆ ವರ್ಗಾಯಿಸಿ ದಲಿತರನ್ನು ವಂಚಿಸಿದ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು, 34,293 ಕೋಟಿ ತೆಗೆದಿಟ್ಟದ್ದು ಯಾಕೆ ಮತ್ತು ಅದನ್ನು ಬೇರೆ ಉದ್ದೇಶಕ್ಕೆ ಕೊಡುವುದು ಯಾಕೆ ಎಂದು ಪ್ರಶ್ನಿಸಿದರು.
ಸರ್ಕಾರ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುವುದನ್ನು ವಿರೋಧಿಸಿ ಎಸ್‍ಸಿ ಮೋರ್ಚಾ, ಎಸ್‍ಟಿ ಮೋರ್ಚಾ ಸೇರಿದಂತೆ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಎಂದು ತಿಳಿಸಿದರು.