Site icon Vistara News

ಕೆಂಪಣ್ಣ ಮಾತುಗಳು ಸಿದ್ದರಾಮಯ್ಯ, ಡಿಕೆಶಿ ಹೇಳಿಕೆಗಳ ಜೆರಾಕ್ಸ್ ಕಾಪಿ: ಎನ್. ರವಿಕುಮಾರ್

ಎನ್. ರವಿಕುಮಾರ್

ಬೆಂಗಳೂರು: ಸಿದ್ದರಾಮಯ್ಯ ಮನೆಯಲ್ಲೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿರುವುದು 40 ಪರ್ಸೆಂಟ್‌ ಕಮಿಷನ್‌ ಆರೋಪದ ಗಾಂಭೀರ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಅವರು ಈ ಹಿಂದಿನಂತೆಯೇ ತಳ ಬುಡ ಇಲ್ಲದ ಆರೋಪ ಮಾಡಿದ್ದಾರೆ. ಅವರ ಮಾತುಗಳು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೆಗಳ ಜೆರಾಕ್ಸ್ ಕಾಪಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪ್ರತಿ ನಿತ್ಯ ಸಾವಿರಾರು ಪತ್ರ ಪ್ರಧಾನಿ ಕಚೇರಿಗೆ ಹೋಗುತ್ತವೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ, ಕೆಂಪಣ್ಣನ ಪತ್ರವೂ ಹೋಗಲಿ. ಕೆಂಪಣ್ಣ ಆರೋಪಕ್ಕೆ ಗಂಭೀರತೆಯೇ ಉಳಿದಿಲ್ಲ, ಹೀಗಾಗಿ ನಮಗೆ ಮುಜುಗರದ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಪರ್ಸೆಂಟೇಜ್ ಇಲ್ಲ, ಅದು ಕಾಂಗ್ರೆಸ್‌ನಲ್ಲಿ ಮಾತ್ರ ಇರುವುದು. ಕಮಿಷನ್‌ ಬಗ್ಗೆ ಅವರು ದಾಖಲೆಗಳನ್ನು ಕೊಡಲು ಸಿದ್ಧವಿಲ್ಲ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೆಂಪಣ್ಣ ಅವರನ್ನು ಕರೆಸಿ ಲಂಚ ಸಾಕ್ಷ್ಯಾಧಾರ ಇದ್ದರೆ ಕೊಡಿ ಎಂದಿದ್ದರು. ಆದರೂ ಅವರು ದಾಖಲೆ ಕೊಟ್ಟಿರಲಿಲ್ಲ. ಕೆಂಪಣ್ಣ ಆರೋಪ ಆಧಾರ ರಹಿತವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ನ್ಯೂಸ್‌ ಪೇಪರ್‌, ಟಿವಿಗಳಲ್ಲಿ ಬರಬೇಕು ಅಂತ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಛೇಡಿಸಿದರು.

ಇದನ್ನೂ ಓದಿ | ನ್ಯಾಯಾಂಗ ತನಿಖೆಯಾಗದಿದ್ದರೆ 40% ಕಮಿಷನ್‌ ನಿಜ ಎಂದರ್ಥ: ಮಾಜಿ ಸಿಎಂ ಸಿದ್ದರಾಮಯ್ಯ

Exit mobile version