ಮುರ್ಡೇಶ್ವರ (ಕಾರವಾರ): ಕಾಂಗ್ರೆಸ್ ಈಗ ಭಯೋತ್ಪಾದಕರು, ಉಗ್ರರಿಗೆ ಬೆಂಬಲ ಕೊಡುತ್ತಾ ಕೊಡುತ್ತಾ ಭಯೋತ್ಪಾದಕರ ಪಾರ್ಟಿಯೇ ಆಗಿಬಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮರ್ಡೇಶ್ವರದಲ್ಲಿ ಮಂಗಳವಾರ ಆರಂಭಗೊಂಡ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು (BJP Meeting) ಉದ್ಘಾಟಿಸಿ ಮಾತನಾಡಿದರು. ಮುರ್ಡೇಶ್ವರ ದೇವಸ್ಥಾನ ಆವರಣದ ಆರ್‌ಎನ್ಎಸ್ ಹಾಲ್‌ನಲ್ಲಿ ಸಭೆ ನಡೆಯುತ್ತಿದ್ದು, ರಾಜ್ಯದ ಸುಮಾರು 160 ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಸಭೆಯ ಹಿನ್ನೆಲೆಯಲ್ಲಿ ಮುರ್ಡೇಶ್ವರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ʻʻವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದಕರನ್ನೇ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಭಯೋತ್ಪಾದನೆ, ಡ್ರಗ್, ಸ್ಯಾಂಡ್ ಮಾಫಿಯಾಗಳಿಗೆ ಬೆಂಬಲ ಕೊಟ್ಟಿದ್ದು ಸಿದ್ಧರಾಮಯ್ಯ ಸರ್ಕಾರ. ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕಿದ್ದು ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರ. ಡಿಕೆ ಶಿವಕುಮಾರ್ ಅವರು ಬೆಳಗಾವಿ ಕುಕ್ಕರ್, ಮಂಗಳೂರು ಕುಕ್ಕರ್ ಒಂದೇ ಅಂದುಕೊಂಡಿದ್ದಾರೆ. ದೇಶ ಒಡೆಯುವಂತಹ, ದೇಶ ವಿರೋಧಿಗಳಿಗೆ, ಭ್ರಷ್ಟರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಬೆಂಬಲ ಕೊಡ್ತಾರೆ. ಅಂದಮೇಲೆ ಕಾಂಗ್ರೆಸ್ ಅದೊಂದು ಭಯೋತ್ಪಾಕರ ಪಾರ್ಟಿʼʼ ಎಂದು ಹೇಳಿದರು ನಳಿನ್ ಕುಮಾರ್ ಕಟೀಲು.
ಅಂಬೇಡ್ಕರ್‌ಗೂ ಕಾಂಗ್ರೆಸ್ ಅವಮಾನ
ʻʻಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಜೈಲುವಾಸ ಮಾಡಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ʼʼ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್, ʻʻಸಾವರ್ಕರ್ ಮಾತ್ರವಲ್ಲ ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿದೆʼʼ ಎಂದರು.
ʻʻಅಂಬೇಡ್ಕರ್ ಅವರ ಹೆಸರಿನಲ್ಲಿ ಅಧಿಕಾರವನ್ನು ಪಡೆದ ಕಾಂಗ್ರೆಸ್ ಅವರಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಲಿಲ್ಲ. ಅವರು ಮೃತರಾದ ಸಂದರ್ಭದಲ್ಲಿ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಸೂಕ್ತ ಬೆಂಬಲ ನೀಡಿರಲಿಲ್ಲ. ಕುಟುಂಬದ ಯಾರೋ ಒಬ್ಬ ಸ್ವಾತಂತ್ರ್ಯ ಹೋರಾಟ ಮಾಡಿದ್ದನ್ನೇ ಇಂದಿಗೂ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಈಗ ಇಲ್ಲ, ಬದಲಾಗಿದೆʼʼ ಎಂದು ಹೇಳಿದರು ನಳಿನ್ ಕುಮಾರ್ ಕಟೀಲ್.
ʻʻಕಾಂಗ್ರೆಸ್ ಕಾಲದಲ್ಲಿ ಕೇವಲ ಬಾಂಬ್ ತಯಾರಕ ಕಾರ್ಖಾನೆಗಳು ಮಾತ್ರ ಸ್ಥಾಪನೆಯಾದವು. ಕೇವಲ ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಗಿದೆʼʼ ಎಂದು ಹೇಳಿದ ಅವರು, ʻʻಕಾಂಗ್ರೆಸ್ ಒಡೆದು ಆಳುವ ರಾಜಕಾರಣ ಮಾಡುತ್ತಿದೆ. ಇಸ್ಲಾಂನಲ್ಲಿ ಪೂಜೆ ಮಾಡುವ ವಿಧಾನವಿಲ್ಲದಿದ್ದರೂ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆಗೆ ತಂದಿದೆ. ಮತಾಂಧನಾದ ಟಿಪ್ಪುವಿನ ಜಯಂತಿ ಮಾಡುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡಿದೆʼʼ ಎಂದರು.
ʻʻಉಗ್ರನ ಎನ್‌ಕೌಂಟರ್ ಮಾಡಿದಾಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರೊಬ್ಬರು ಕಣ್ಣೀರು ಹಾಕ್ತಾರೆ. ಆದರೆ, ಸೈನಿಕರು ಸತ್ತಾಗ ಅವರು ಕಣ್ಣೀರು ಹಾಕುವುದಿಲ್ಲʼʼ ಎಂದು ಆಪಾದಿಸಿದ ಅವರು, ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆʼʼ ಎಂದರು.
ʻʻರಾಜ್ಯದ ಕಾಂಗ್ರೆಸ್ ಅಧ್ಯಕ್ಷರೇ ಜಾಮೀನಿನ ಮೇಲೆ ಇದ್ದಾರೆ. ಸಿಬಿಐ ದಾಳಿ ಮಾಡಿದರೆ ಪ್ರತಿಭಟನೆ ಮಾಡ್ತಾರೆ. ಈ ಹಿಂದೆ ನರೇಂದ್ರ ಮೋದಿ, ಅಮಿತ್ ಶಾ ಅವರ ಮೇಲೂ ದೂರು ದಾಖಲಾಗಿತ್ತು, ವಿಚಾರಣೆಯೂ ನಡೆದಿತ್ತು. ಆಗ ಯಾರೂ ಹೋರಾಟ ಮಾಡಲಿಲ್ಲ. ಕಾನೂನಿನ ಮೂಲಕವೇ ಅವರು ಗೆಲುವನ್ನು ಪಡೆದರು. ಆದರೆ, ಕಾಂಗ್ರೆಸ್‌ನವರಿಗೆ ಕಾನೂನು. ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲವಾಗಿದೆ. ಡಿ.ಕೆ ಶಿವಕುಮಾರ್ ಅವರಂತೂ ರೌಡಿಸಂ ರಾಜಕಾರಣ ಬಿಟ್ಟು ಭಯೋತ್ಪಾದಕ ರಾಜಕಾರಣ ಪ್ರಾರಂಭಿಸಿದ್ದಾರೆʼʼ ಎಂದು ಆಪಾದಿಸಿದರು ನಳಿನ್ ಕುಮಾರ್ ಕಟೀಲ್.
ಇದನ್ನೂ ಓದಿ | DK Shivakumar | ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಗೆ ಖರ್ಗೆ ಆಕ್ರೋಶ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ