ಬೆಂಗಳೂರು: ಐಟಿ ದಾಳಿ ವೇಳೆ ಗುತ್ತಿಗೆದಾರರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿರುವುದು, ಭ್ರಷ್ಟಾಚಾರ, ಕಮಿಷನ್ ದಂಧೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ (BJP Protest) ಮುಂದಾಗಿದೆ. ಹೀಗಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಅ.16 ಮತ್ತು 17ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಮತ್ತು ಮಂಡಲಗಳಲ್ಲಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರದ ವಿರುದ್ಧ ಅ.16 ಮತ್ತು 17ರಂದು ಬಿಜೆಪಿ ವತಿಯಿಂದ ಎಲ್ಲ ಜಿಲ್ಲೆ ಮತ್ತು ಮಂಡಲಗಳಲ್ಲಿ ದೊಡ್ಡದಾದ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.
ಇವತ್ತು ನಾನು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಅ.16ರಂದು ಜಿಲ್ಲೆಗಳಲ್ಲಿ ಮತ್ತು 17ರಂದು ಮಂಡಲಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Brand Bangalore : ಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು; ಕಸ ಡಂಪಿಂಗ್‌ಗೆ ಎಚ್‌ಡಿಕೆ ಕೆಂಡ
ಅಧಿಕಾರಿಗಳಿಗೇ ರೇಟ್ ಫಿಕ್ಸ್ ಮಾಡಿದ ಸರ್ಕಾರವಿದು. ಅಧಿಕಾರಿಗಳಿಂದ ಭ್ರಷ್ಟಾಚಾರ ಆರಂಭಿಸಿದ ಈ ಸರ್ಕಾರದ ಕಾರ್ಯವು ಕಲಾವಿದರನ್ನೂ ಬಿಟ್ಟಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದ ಅವರು, ತಮ್ಮಲ್ಲಿ ಲಂಚ ಕೇಳಿದ್ದಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ. ಹಿಂದೆ ಎಟಿಎಂ ಸರ್ಕಾರ ಬರಲಿದೆ ಎಂದಾಗ ಸಾಕ್ಷಿ ಕೊಡಿ ಎಂದಿದ್ದರು. ಇವತ್ತು ಸಾಕ್ಷಿ, ಆಧಾರಗಳನ್ನು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್ ಇಟ್ಟಿದ್ದಾರೆ ಎಂದು ನುಡಿದರು.
ಐ.ಟಿ.ದಾಳಿ ಆದಾಗ ಗುತ್ತಿಗೆದಾರ, ಬಿಲ್ಡರ್‌ಗಳ ಮನೆಯಲ್ಲಿ 40 ಕೋಟಿ, 50 ಕೋಟಿ ರೂ. ಹಣ ಸಿಗುತ್ತಿದೆ. 600 ಕೋಟಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ 45 ಕೋಟಿ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ. ಇದಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇದೆ ಎಂಬುದು ಸ್ಪಷ್ಟವಾಗಿದೆ. ಈ ಲೂಟಿ ಸರ್ಕಾಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ | Karnataka Politics: ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾದ ಕೆಪಿಸಿಸಿ: ಸಿ.ಟಿ.ರವಿ
ರಾಜ್ಯದ್ದು ಎಟಿಎಂ ಸರ್ಕಾರ
ಲೂಟಿ ಸರ್ಕಾರ ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚ ರಾಜ್ಯಗಳ ಚುನಾವಣೆಗೆ ಅದನ್ನು ಕಳುಹಿಸುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕವು ಎಟಿಎಂ ಆಗಿದೆ. ಇವತ್ತು ಇನ್ನೊಬ್ಬರ ಮನೆಯಲ್ಲಿ ಹಣ ಸಿಕ್ಕಿದ್ದು, ಇದೆಲ್ಲವೂ ಲೂಟಿ ಹಣ ಎಂದರಲ್ಲದೆ, ದೂರು ಕೊಡುವ ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.