ಬೆಂಗಳೂರು: 200 ಯೂನಿಟ್‍ವರೆಗೆ ವಿದ್ಯುತ್ ಉಚಿತ ಎಂದಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ವಾರ್ಷಿಕ ಸರಾಸರಿಗಿಂತ ಶೇ.10 ಹೆಚ್ಚುವರಿ ಬಳಸಬಹುದು ಎಂದು ಆದೇಶ ಹೊರಡಿಸಿ ಜನವಿರೋಧಿ ನೀತಿ ಪ್ರದರ್ಶಿಸಿದೆ (Karnataka Politics). ಹೀಗಾಗಿ ಜನವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ಜೂನ್ 5 ಮತ್ತು 6ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುಂಚೆ ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯೂನಿಟ್ ಬಳಸಬಹುದು. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್ ಮೀರುವಂತಿಲ್ಲ ಎಂದು ಷರತ್ತು ಅಥವಾ ನಿರ್ಬಂಧವನ್ನು ಕರ್ನಾಟಕ ಸರ್ಕಾರ ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯೂನಿಟ್ ಎಂದಿದ್ದವರು ಈಗ ಮಾತು ತಪ್ಪಿರುವುದು ಸತ್ಯವಲ್ಲವೇ, ಇದು ವಚನಭ್ರಷ್ಟ ಆದಂತಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Congress Guarantee: ಮಹಿಳೆಯರೂ ಬಸ್ ಟಿಕೆಟ್ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್!
ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯೂನಿಟ್‍ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್‍ಗೆ 56 ರೂ. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರ್ಕಾರ ಮಾಡಿದ್ದೇನು? ಒಂದೆಡೆ ಉಚಿತ ಎನ್ನುತ್ತದೆ; ಅದೇ ರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ ಎಂದು ತಿಳಿಸಿದರು.
ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಗೆ ಬಿಜೆಪಿ ಸರ್ಕಾರ ಹೆಚ್ಚಿಸಿತ್ತು. ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು? ಎಂದು ಕೇಳಿದರು. ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ಕರ್ನಾಟಕದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ನಾವು ಪ್ರೋತ್ಸಾಹಧನವನ್ನು 5 ರೂಪಾಯಿಗೆ ಹೆಚ್ಚಿಸಿದ್ದೆವು ಎಂದು ವಿವರಿಸಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಇದು. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಲು ಆಗ್ರಹಿಸಿದರು.
ನೂತನ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಈ ಹಿಂದೆ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಕಾನೂನು ಕುರಿತು ಚರ್ಚಿಸಿ ಅದನ್ನು ಹಿಂಪಡೆಯುತ್ತೇವೆ; ಮತ್ತೆ ಗೋಹತ್ಯೆಗೆ ಅವಕಾಶ ಕೊಡುತ್ತೇವೆ. ನಮ್ಮ ಮನೆಯಲ್ಲೇ ವಯಸ್ಸಾದ ಹಸುಗಳಿದ್ದವು. ಅವುಗಳನ್ನು ಹೇಗೆ ರಕ್ಷಿಸುವುದು? ಹೇಗೆ ಸಾಕಲು ಸಾಧ್ಯ? ನಮಗೆ ನಷ್ಟ ಆಗುತ್ತದೆ ಎಂದಿದ್ದಾರೆ. ಅವುಗಳು ಸತ್ತಾಗ ಹೂಳಲೂ ಕಷ್ಟವಾಗುತ್ತಿದೆ. ಆದ್ದರಿಂದ ವಯಸ್ಸಾದ ಗೋವುಗಳನ್ನು ವಧೆ ಮಾಡಲು ಅವಕಾಶ ಕೊಡುತ್ತೇವೆ ಎಂದು ತಿಳಿಸಿದ್ದಾರೆ, ಇಂದು ಖಂಡನೀಯ ಎಂದು ಟೀಕಿಸಿದರು.
ಇದನ್ನೂ ಓದಿ | Karnataka Politics: ಹಿಟ್ಲರ್ ಗಿಟ್ಲರ್ ಅಂದ್ರೆ ಜೈಲು ಗ್ಯಾರಂಟಿ: ಇದು ಚಕ್ರವರ್ತಿ ಸೂಲಿಬೆಲೆಗೆ ಎಂ.ಬಿ. ಪಾಟೀಲ್ ಎಚ್ಚರಿಕೆ ಧಾಟಿ!
ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿ ಅವರು ಕೂಡ ಗೋಹತ್ಯೆ ಮಾಡಬಾರದು ಎಂದಿದ್ದರು. 1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು, ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಿವೆ. ಆದರೆ, ಸಿದ್ದರಾಮಯ್ಯ ಸರ್ಕಾರವು ಗೋಹತ್ಯೆಗೆ ಅವಕಾಶ ಮಾಡಿಕೊಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ರದ್ದತಿ ಪ್ರಸ್ತಾಪವನ್ನು ಬಿಜೆಪಿ ಖಂಡಿಸುತ್ತದೆ. ಗೋಹತ್ಯಾ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.