Site icon Vistara News

BJP Protest: ಜೂ.20ರಂದು ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಹೋರಾಟ: ಆರ್.ಅಶೋಕ್

Ex Minister R Ashoka

#image_title

ಬೆಂಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು 10 ಕೆ.ಜಿ ಪಡಿತರ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿ ಜೂನ್‌ 20ರಂದು ಬೆಂಗಳೂರು ಸೇರಿ 10 ವಿಭಾಗ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ (BJP Protest) ನಡೆಸಲಿದ್ದೇವೆ ಎಂದು ಮಾಜಿ ಸಚಿವ ಆರ್.ಅಶೋಕ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ಕುರಿತು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜುಲೈ 4ರಂದು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ

ವಿದ್ಯುತ್ ಬಿಲ್ ಹೆಚ್ಚಳ, ಠೇವಣಿ ಹೆಚ್ಚಳ, ಲೋಡ್ ಶೆಡ್ಡಿಂಗ್, ಪಠ್ಯಪುಸ್ತಕ ಏಕಾಏಕಿ ಬದಲಾವಣೆ, ಮತಾಂತರ ನಿಷೇಧ ಕಾಯ್ದೆ ರದ್ದು ಪ್ರಸ್ತಾಪ, ಗೋಹತ್ಯಾ ನಿಷೇಧ ಕಾಯ್ದೆ ಹಿಂತೆಗೆತ ನಿರ್ಧಾರ ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಬಿಜೆಪಿ ಪಕ್ಷದ ಎಲ್ಲ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಮಾಜಿ ಸಚಿವರಿಗೆ ಪ್ರತಿಭಟನೆ ನಡೆಸಲು ನಳಿನ್‍ಕುಮಾರ್ ಕಟೀಲ್ ಅವರು ಸೂಚನೆ ಕೊಟ್ಟಿದ್ದಾರೆ. ಸಂಸದರು ಮತ್ತು ಶಾಸಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

‘ಹೇಳಿದ್ದೇನು? ಮಾಡಿದ್ದೇನು?’ ಹೋರಾಟ ಇದಾಗಲಿದೆ. ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಕಂಡಿಷನ್‍ಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದಂತಹ ಕಂಡಿಷನ್ ಹಾಕಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಎಲ್ಲ ನಿರುದ್ಯೋಗಿ ಪದವೀಧರ ಯುವಕರಿಗೆ 3 ಸಾವಿರ, ಡಿಪ್ಲೊಮಾ ಪಡೆದು ನಿರುದ್ಯೋಗಿ ಆಗಿರುವವರಿಗೆ 1,500 ರೂ. ಕೊಡುವುದಾಗಿ ತಿಳಿಸಿದ್ದರು. ಈಗ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದು ಆರು ತಿಂಗಳ ಪ್ರಯತ್ನದ ಬಳಿಕವೂ ಉದ್ಯೋಗ ಲಭಿಸದವರು ಎಂದು ಕಂಡಿಷನ್ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನಿರುದ್ಯೋಗಿ ಯುವಜನರೆಂದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಉದ್ಯೋಗ ಸಿಗದೆ ನೊಂದವರು, ಈಗ ಪಾಸಾದವರಲ್ಲ. ಬೇಕಿದ್ದರೆ ಈಗ ಪಾಸಾದವರಿಗೂ ಕೊಡಲಿ. ನಮ್ಮ ಅಭ್ಯಂತರ ಏನಿಲ್ಲ. ವಾಸ್ತವವಾಗಿ ನೊಂದವರಿಗೆ ಕೊಡಬೇಕಿತ್ತು. ಇದು ಹಣೆಗೆ ತುಪ್ಪ ಸವರುವ ಕಾರ್ಯ. ಮೂಗಿಗೆ ತುಪ್ಪ ಸವರಿದರೆ ಪ್ರಯತ್ನ ಮಾಡಬಹುದು. ಆ ಥರದ ಒಂದು ಯೋಜನೆ. ಇದರ ವಿರುದ್ಧ ‘ಹೇಳಿದ್ದೇನು, ಮಾಡಿದ್ದೇನು; ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರʼ ಎಂಬ ಹೋರಾಟವನ್ನು ಜಿಲ್ಲಾ ಕೇಂದ್ರಗಳು ಮತ್ತು ವಿಧಾನಸಭೆಯ ಒಳಗಡೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರ ಖಂಡಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸುತ್ತೇವೆ. ವಿಧಾನಸಭೆ ಒಳಗಡೆಯೂ ದೊಡ್ಡ ರೀತಿಯ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಆಡಳಿತ ಮಂಡಿಸುವ ಕಾಯ್ದೆ ಆಧರಿಸಿ ಮತ್ತೊಂದು ಹೋರಾಟದ ದಿನಾಂಕ ಪ್ರಕಟಿಸುತ್ತೇವೆ ಎಂದ ಅವರು, ರಾಜ್ಯದ ಜನರನ್ನು ಒಳಗೊಂಡು ಜೈಲ್ ಭರೋ ಅಥವಾ ಇನ್ಯಾವುದಾದರೂ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

Exit mobile version