ಬಳ್ಳಾರಿ: ಈ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಬಿಜೆಪಿ ಪಕ್ಷವು 130ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯಿಂದ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ, ರಾಜ್ಯದಲ್ಲಿ ಎಲ್ಲ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿ ಅನುಕೂಲ ಮಾಡಿದೆ ಎಂದರು.
ಇದನ್ನೂ ಓದಿ: BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 700 ಕೋಟಿ ರೂ. ವೆಚ್ಚದಲ್ಲಿ ಕಾಲುವೆ ರಿಪೇರಿ, ಸಣ್ಣ ಸಣ್ಣ ಅಣೆಕಟ್ಟುಗಳು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ದೀನ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದೆ ಕಾಂಗ್ರೆಸ್
ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿದರೂ ಅಭಿವೃದ್ಧಿ ಮಾಡಲಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಲೋಕಸಭಾ ಪ್ರವೇಶಿಸಲು ಬಿಡಲಿಲ್ಲ, ಭಾರತ ರತ್ನ ಕೂಡ ನೀಡದೆ ಕಡೆಗಣಿಸಿದರು. ಡಾ. ಬಾಬು ಜಗಜೀವನ್ ರಾವ್ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಿದರು. ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕೆ. ಪರಮೇಶ್ವರ ಅವರನ್ನು ಕಾಂಗ್ರೆಸ್‌ನವರೇ ಸೋಲಿಸಿ ದಲಿತರನ್ನು ಬೆಳೆಯಲು ಬಿಡಲಿಲ್ಲ. ಕಾಂಗ್ರೆಸ್ ನೀತಿ ದೀನ ದಲಿತರನ್ನು ತುಳಿಯುವಂತಹದ್ದಾಗಿದೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.
ಸಚಿವ ಸಂಪುಟದಲ್ಲಿ ದೀನದಲಿತರಿಗೆ ಹೆಚ್ಚಿನ ಸ್ಥಾನ
ಬಿಜೆಪಿ ಸಚಿವ ಸಂಪುಟದಲ್ಲಿ ದೀನದಲಿತರಿಗೆ ಹೆಚ್ಚಿನ ಸ್ಥಾನ ನೀಡಿದೆ. ಎಸ್‌ಸಿ, ಎಸ್‌ಟಿ, ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಜೆ ಕಳೆದ ನಲವತ್ತು ವರ್ಷಗಳಿಂದ ಹೋರಾಟ ನಡೆಸಿದರೂ ಕಾಂಗ್ರೆಸ್ ಮೀಸಲಾತಿ ಜಾರಿ ಮಾಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಜಾರಿ ಮಾಡಿದೆ. ಈ ಸಾರಿ ಖಂಡಿತವಾಗಿ ಬಿಜೆಪಿ ಗೆಲ್ಲಲಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ಇದನ್ನೂ ಓದಿ: Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ
ಶೂನ್ಯ ಸಾಧನೆ
ಮಾಜಿ ಸಿಎಂ ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದರೂ ಶೂನ್ಯ ಸಾಧನೆ. ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಕೆಂಪಣ್ಣ ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಕಾಮಗಾರಿ ಮಾಡಿಲ್ಲ. ಯಾವುದಾದರೂ ಕಾಮಗಾರಿಯಲ್ಲಿ ಕಮಿಷನ್ ನೀಡಿದ್ದರ ಬಗ್ಗೆ ದಾಖಲೆಗಳನ್ನೂ ಸಲ್ಲಿಸಿಲ್ಲ. ದಾಖಲೆ ನೀಡಿದರೆ ತನಿಖೆ ಸಂಸ್ಥೆಗಳ ಮೂಲಕ ಬಹಿರಂಗ ಪಡಿಸಲಾಗುವುದು. ಲೋಕಾಯುಕ್ತಕ್ಕೆ ದಾಖಲೆಗಳನ್ನು ಸಲ್ಲಿಸಿ ಕಮಿಷನ್ ಆರೋಪ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿತೇಂದ್ರ ರೆಡ್ಡಿ, ಎನ್. ವೈ. ಹನುಮಂತಪ್ಪ, ಕೆ.ಎಂ. ಮಹೇಶ್ವರ ಸ್ವಾಮಿ, ಇತರರು ಇದ್ದರು.