ಕೊಪ್ಪಳ: ಸುಷ್ಮಾ ಸ್ವರಾಜ್ ಈ ದೇಶ ಅಭಿಮಾನದಿಂದ ನೋಡುವ ಹೆಣ್ಮಗಳು. ರಾಜಕಾರಣಿ, ಉನ್ನತ ಮಟ್ಟಕ್ಕೇರಿದ ಸಾಧಕಿ ಅನ್ನುವ ಅಭಿಮಾನ ಒಂದು ಕಡೆಯಾದರೆ, ಮನೆ ಮಗಳು ಎಂಬಷ್ಟು ಪ್ರೀತಿ ಇನ್ನೊಂದು ಕಡೆ. ಅದರಲ್ಲೂ ಬಳ್ಳಾರಿ, ಕೊಪ್ಪಳದ ಜನರಿಗೆ ಅವರ ಮೇಲೆ ವಿಪರೀತ ಪ್ರೀತಿ. ಇಂಥ ಅಭಿಮಾನದ ಹೆಣ್ಮಗಳು ನಿಧನರಾಗಿ ಆಗಸ್ಟ್ ಆರಕ್ಕೆ ಮೂರು ವರ್ಷ.
ಅವರಿಲ್ಲದೆ ಮೂರು ವರ್ಷವಾದರೂ ಅವರ ಮೇಲಿನ ಅಭಿಮಾನ ಇನ್ನೂ ಹಾಗೇ ಉಳಿದಿದೆ. ಮನೆ ಮನೆಗಳಲ್ಲೂ ಅವರ ಮೇಲೆ ಎಷ್ಟೊಂದು ಪ್ರೀತಿ ಇದೆ ಎಂದರೆ, ಕೊಪ್ಪಳದ ಬಿಜೆಪಿ ಕಾರ್ಯಕರ್ತರೊಬ್ಬರು ಇತ್ತೀಚೆಗಷ್ಟೇ ಹುಟ್ಟಿದ ತಮ್ಮ ಪುಟ್ಟ ಮಗಳಿಗೆ ಸುಷ್ಮಾ ಸ್ವರಾಜ್ ಅವರ ಹೆಸರನ್ನೇ ಇಡಲು ಮುಂದಾಗಿದ್ದಾರೆ. ಆದರೆ, ಅವರದೊಂದು ಷರತ್ತು ಇದೆ, ಅದೇನೆಂದರೆ, ರೆಡ್ಡಿ ಬ್ರದರ್ಸ್ ಅವರೇ ನಾಮಕರಣ ಮಾಡಬೇಕು ಎನ್ನುವುದು.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ದೇವರಾಜ ಎಂಬವರೇ ತಮ್ಮ ಮಗಳಿಗೆ ಸುಷ್ಮಾ ಸ್ವರಾಜ್ ಅವರ ಹೆಸರನ್ನು ನಾಮಕರಣ ಮಾಡಲು ಮುಂದಾದವರು. ಬಿಜೆಪಿ ಕಾರ್ಯಕರ್ತರಾಗಿರುವ ದೇವರಾಜ ದಿ. ಸುಷ್ಮಾ ಸ್ವರಾಜ್ ಅವರ ಅಭಿಮಾನಿಯಂತೆ. ಹೀಗಾಗಿ ತಮಗೆ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡುವುದಾಗಿ ಅಭಿಲಾಷೆ ಇಟ್ಟುಕೊಂಡಿದ್ದರು.
ಅವರ ಅಭಿಲಾಷೆಗೆ ಪೂರಕವಾಗಿ ಕೆಲ ದಿನಗಳ ಹಿಂದೆ ದೇವರಾಜ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಮಗುವಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡು ತೀರ್ಮಾನಿಸಿದ್ದಾರೆ. ಆದರೆ ಮಗುವಿಗೆ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡಲು ಜನಾರ್ದನರಡ್ಡಿ ಹಾಗೂ ಶ್ರೀರಾಮುಲು ಅವರು ಬರಬೇಕು ಎಂದು ದೇವರಾಜ ಮನವಿ ಮಾಡಿದ್ದಾರೆ.
ಜನಾರ್ದನರೆಡ್ಡಿ ಹಾಗೂ ಬಿ. ಶ್ರೀರಾಮುಲು ದಿ. ಸುಷ್ಮಾ ಸ್ವರಾಜ್ ಅವರಿಗೆ ಮಾನಸ ಪುತ್ರರೆಂದು ಹೆಸರಾದವರು. ಹೀಗಾಗಿ ನನ್ನ ಮಗಳಿಗೆ ಅವರು ಬಂದು ನಾಮಕರಣ ಮಾಡಬೇಕು. ಅವರು ಬಂದು ನಾಮಕರಣ ಮಾಡುವವರೆಗೂ ನನ್ನ ಮಗಳಿಗೆ ನಾಮಕರಣ ಮಾಡುವುದಿಲ್ಲ ಎಂದು ದೇವರಾಜ ಪಟ್ಟು ಹಿಡಿದಿದ್ದಾರೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಆಪ್ತ ಸಹಾಯಕರಿಗೂ ದೇವರಾಜ ಈ ವಿಷಯವನ್ನು ಗಮನಕ್ಕೆ ತಂದಿದ್ದಾರಂತೆ. ಆದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನ ಈ ಬೇಡಿಕೆಯನ್ನು ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.