Site icon Vistara News

ಸುಳ್ಯದಲ್ಲಿ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ

yuva morcha leader

ಮಂಗಳೂರು: ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ನಡೆದಿದೆ. ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (೨೯) ಅವರನ್ನು ಅವರ ಅಂಗಡಿಯಲ್ಲಿಯೇ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಎಂಟು ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಮಸೂದ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆದಿರಬಹುದು ಎಂದು ಅನುಮಾನಿಸಲಾಗುತ್ತಿದೆ.

ಪ್ರವೀಣ್ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುವ ವೇಳೆಯಲ್ಲಿ ಒಂದೇ ಬೈಕಿನಲ್ಲಿ ಬಂದಿದ್ದ ಮೂವರು ಅವರ ಮೇಲೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರವೀಣ್‌ ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಗಂಭೀರ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಬಂದ ಬೈಕ್ ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂಬ ವದಂತಿ ಹರಡಿದೆಯಾದರೂ ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ನೀಡಿಲ್ಲ.

ಇದು ಮಸೂದ್ ಕೊಲೆಗೆ ನಡೆದ ಪ್ರತಿಕಾರವೋ ಅಥವಾ ಬೇರೆ ವ್ಯಯಕ್ತಿಕ ಕಾರಣಕ್ಕೆ ನಡೆದ ಕೃತ್ಯವೋ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಎಂಬ ೧೮ ವರ್ಷದ ಯುವಕನ ಹತ್ಯೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್‌ನ ಮೇಲೆ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬುವರು ಹಲ್ಲೆ ನಡೆಸಿದ್ದರು. ಗಂಭೀರಗಾಯಗೊಂಡಿದ್ದ ಮಸೂದ್‌ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಜು.19ರಂದು ಸುಧೀರ್ ಎಂಬಾತ ಮಸೂದ್‌ನ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್ ನನ್ನು ರಾಜಿ ಮಾತುಕತೆ ಕರೆಸಲಾಗಿತ್ತು. ಮಸೂದ್ ಅವರು ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಹಲ್ಲೆ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಈ ಹತ್ಯೆಗೂ ಈ ಪ್ರವೀಣ್‌ ಹತ್ಯೆಗೂ ಸಂಬಂಧವಿದೆಯೇ ಎಂಬ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ನಟಿ ಅನುಷ್ಕಾ ಶೆಟ್ಟಿ ಸೋದರನ ಕೊಲೆ ಯತ್ನ, ಮಾಹಿತಿ ಸಂಗ್ರಹಿಸಿದ ಮಂಗಳೂರು ಪೊಲೀಸ್‌

Exit mobile version