ಬೆಂಗಳೂರು: ಕುವೆಂಪು ರಚಿತ ನಾಡಗೀತೆಯ ಪ್ರತಿ ಸಾಲು ಈ ನಾಡಿನ ಬಹುತ್ವದ ಪ್ರತೀಕ. ಆದರೆ, ನಡೆಯಲ್ಲಿ ಸೃಜನತೆ, ನುಡಿಯಲ್ಲಿ ಸೌಜನ್ಯವಿಲ್ಲದ ಬಿಜೆಪಿ ಐಟಿ ಸೆಲ್‌ನ ₹2 ಟ್ರೋಲರ್‌ಗಳು ಹಾಗೂ ಬಾಡಿಗೆ ಭಾಷಣಕಾರರು ಮಹಾಕವಿ ಹಾಗೂ ರಾಜ್ಯದ ಅಸ್ಮಿತೆಯನ್ನು ಅಪಮಾನಿಸುವಂಥ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಫೇಸ್‌ಬುಕ್‌ನಲ್ಲಿ ಟೀಕಿಸಿರುವ ಅವರು, ನಾಡಿನ ಭವಿಷ್ಯವಾಗಿರುವ ಮಕ್ಕಳು ಓದಬೇಕಾಗಿರುವ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಇಂತಹವರನ್ನು ನೇಮಕ ಮಾಡಿ ಬಿಜೆಪಿ ಸರ್ಕಾರ ಮಂಗನ ಕೈಗೆ ಮಾಣಿಕ್ಯ ಕೊಟ್ಟಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದು ಸಮಾಜವನ್ನು ಅಧಃಪತನದತ್ತ ತಳ್ಳಲು ಬಿಜೆಪಿ ನಡೆಸುತ್ತಿರುವ ಹುನ್ನಾರಕ್ಕೆ ಸಾಕ್ಷಿ. ಈ ಕಾರಣಕ್ಕಾಗಿಯೇ ಪಠ್ಯಪುಸ್ತಕಗಳಲ್ಲಿ ನಮ್ಮ ಬರಹಗಳೇ ಬೇಡ ಎಂದು ದೇವನೂರು ಮಹದೇವ, ಜಿ.ರಾಮಕೃಷ್ಣ ಅವರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ | ನಾಡಗೀತೆಯನ್ನು ಅಪಮಾನಿಸಿದರೆ ಸುಮ್ಮನಿರುವುದಿಲ್ಲ: HDK
ಶೋಷಿತ, ಹಿಂದುಳಿದ ಹಾಗೂ ಮಹಿಳೆಯರ ಧ್ವನಿ ಜನರನ್ನು ಮುಟ್ಟಲು ಪಿ. ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಇಂದು ಅವರ ಲೇಖನಕ್ಕೆ ಟ್ರೋಲ್ ಸಂಘ ಕತ್ತರಿ ಹಾಕಿದೆ. ಕುವೆಂಪು ಅವರಂಥ ವಿಶ್ವಮಾನವರನ್ನೇ ತುಚ್ಛವಾಗಿ ನಡೆಸಿಕೊಳ್ಳುವ ಈ ಸಮಾಜದಲ್ಲಿ, ಮುಂದಿನ ದಿನಗಳಲ್ಲಿ ಶೋಷಿತ ಸಮುದಾಯಕ್ಕೆ ಜೀವನ ನಡೆಸುವ ಹಕ್ಕೂ ಇಲ್ಲವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ದೊಡ್ಡ ಪಟ್ಟಿಯೇ ನಮ್ಮಲ್ಲಿ ಇದೆ. ಆದರೆ ಬ್ರಿಟಿಷರನ್ನು ಇಲ್ಲೇ ಉಳಿಸಿ ಬೆಳೆಸಲು ಮುಂದಾದವರನ್ನು ಮಹಾನ್ ದೇಶಭಕ್ತರಂತೆ ಬಿಂಬಿಸಲಾಗುತ್ತಿದೆ. ಚರಿತ್ರೆಯನ್ನು ತಿರುಚಿ ಅದನ್ನೇ ಪಠ್ಯದಲ್ಲಿ ಸೇರಿಸುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದರು.
ಮುಖ್ಯಮಂತ್ರಿಗೆ ಕುವೆಂಪು ಅವರ ಬಗ್ಗೆ ಗೌರವ, ನಾಡು-ನುಡಿಯ ಬಗ್ಗೆ ಅಭಿಮಾನ ಇದ್ದರೆ, ರಾಜ್ಯದ ಅಸ್ಮಿತೆಯನ್ನು ಕಾಪಾಡಬೇಕು ಎಂಬ ಮನಸ್ಸಿದ್ದರೆ ಈಗಲೇ ಪರಿಷ್ಕರಣೆಯಾಗಿರುವ ಪಠ್ಯವನ್ನು ತೆಗೆದುಹಾಕಿ ಬಿಜೆಪಿ ಐಟಿ ಸೆಲ್ ಟ್ರೋಲರ್‌ಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ