ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election) ಕಾವು ಜೋರಾಗಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ʼಜಯವಾಹಿನಿʼ ಹೆಸರಲ್ಲಿ ಭರ್ಜರಿ ರೋಡ್ ಶೋ ಆರಂಭಿಸಿದ್ದು, ಒಂದೇ ದಿನದಲ್ಲಿ 11 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಏ.27ರವರೆಗೆ ರಾಜ್ಯದ ವಿವಿಧೆಡೆ ಸಿಎಂ ಅವರು ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.
ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ʼಜಯವಾಹಿನಿʼ ಯಾತ್ರೆ ಹೊರಟರು. ನಂತರ ಮೊದಲಿಗೆ ಯಲಹಂಕದಲ್ಲಿ ಪ್ರಚಾರ ಆರಂಭಿಸಿದ ಅವರು ರಾಜಾನುಕುಂಟೆ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಪ್ರಚಾರ ನಡೆಸಿದರು. ಸಾವಿರಾರು ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗಿಯಾಗಿದ್ದರು. ಅವರಿಗೆ ಆರೋಗ್ಯ ಸಚಿವ ಡಾ.ಸುಧಾಕರ್, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಸಾಥ್ ನೀಡಿದರು.
ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅಧರ್ಮ, ಅನೀತಿ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಡಳಿತ, ಪಕ್ಷಪಾತ, ಒಡೆದು ಆಳುವ ನೀತಿ, ಅನ್ಯಾಯ, ಅನೀತಿ, ಅಧರ್ಮ. ಆದ್ದರಿಂದ ಈ ನೆಲದಿಂದ ಕಾಂಗ್ರೆಸ್ ಅನ್ನು ಶಾಶ್ವತವಾಗಿ ಕಿತ್ತುಹಾಕಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಯಲಹಂಕ ಮತ್ತು ರಾಜಾನುಕುಂಟೆಯಲ್ಲಿ ನಡೆದ ಜಯವಾಹಿನಿ ಯಾತ್ರೆಯಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್. ವಿಶ್ವನಾಥ್ ಪರ ಪ್ರಚಾರ ನಡೆಸಿದ ಅವರು, ಭಾರತೀಯ ಜನತಾ ಪಕ್ಷದ ಜಯವಾಹಿನಿ ಯಾತ್ರೆಯನ್ನು ಯಲಹಂಕದಿಂದ ಶುಭಾರಂಭ ಮಾಡಿದ್ದೇವೆ. ಯಲಹಂಕ ಕ್ಷೇತ್ರ ಅತಿ ಹೆಚ್ಚು ಮತಗಳಿಂದ ಆರಿಸಿ ಬರುವ ಬೆಂಗಳೂರಿನ ನಂಬರ್ ಒನ್ ಕ್ಷೇತ್ರ. ಅದಕ್ಕೆ ಕಾರಣ ಕಳೆದ ಹದಿನೈದು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಎಸ್.ಆರ್. ವಿಶ್ವನಾಥ್ ಅವರು ಎಂದು ಹೇಳಿದರು.
ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ
2013-18ರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್ ನೇಮಕಾತಿ ಹಗರಣ, ಪ್ರಶ್ನೆಪತ್ರಿಕೆ ಲೀಕ್ ಹಗರಣ, ಶಿಕ್ಷಕ ನೇಮಕಾತಿ ಹಗರಣ, 8000 ಕೋಟಿ ರೂ. ಮೌಲ್ಯದ 843 ಎಕರೆ ರಿಡೂ ಹಗರಣ ನಡೆದಿದೆ. ಈ ಮೂಲಕ ಸಿದ್ದರಾಮಯ್ಯ ಬೆಂಗಳೂರು ಸೇರಿ ರಾಜ್ಯಾದ್ಯಂತ ಲೂಟಿ ಮಾಡಿದ್ದಾರೆ. ಇಂತಹ ಕಾಂಗ್ರೆಸ್ ಅನ್ನು ಕಿತ್ತೊಗೆದರೆ ಭ್ರಷ್ಟಾಚಾರವನ್ನು ಕಿತ್ತೊಗೆದಂತೆ ಎಂದು ತಿಳಿಸಿದರು.
ಗ್ಯಾರೆಂಟಿ ಕಾರ್ಡ್ ಗಳಗಂಟಿ
ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಒಡೆಯುವ ಕೆಲಸ ಕಾಂಗ್ರೆಸ್‌ನವರು ಮಾಡಿದ್ದಾರೆ. ಅವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದರಲ್ಲಿ ಉಪ್ಪಿನಕಾಯಿ ಹಾಕುವುದು ಬಿಟ್ಟರೆ ಬೇರೇನೂ ಮಾಡೋಕೆ ಆಗಲ್ಲ. ಚುನಾವಣೆವರೆಗೂ ಅದು ಗ್ಯಾರೆಂಟಿ. ಚುನಾವಣೆ ನಂತರ ಅದು ಗಳಗಂಟಿ. ಆದ್ದರಿಂದ ಕಾಂಗ್ರೆಸ್ ಕಿತ್ತೊಗೆಯಲು ಕೆಂಪೇಗೌಡರು ಮೆಟ್ಟಿದ ಗಂಡು ಭೂಮಿಯಿಂದ ನನ್ನ ಪ್ರಚಾರ ಮಾಡುತ್ತಿದ್ದೇನೆ. ಉತ್ತಮ ಆಡಳಿತವೇ ಬಿಜೆಪಿ ಧ್ಯೇಯವಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಇದನ್ನೂ ಓದಿ | BJP Karnataka: ಕಾಂಗ್ರೆಸ್‌ಗೆ ಹೋಗಿರುವುದು ಕುಂಡದ ಗಿಡಗಳು; ಹೆಮ್ಮರಗಳು ಬಿಜೆಪಿಯಲ್ಲೇ ಇವೆ ಎಂದ ಸಿಎಂ ಬೊಮ್ಮಾಯಿ
ನೆಲಮಂಗಲ ಮಾದರಿ ಕ್ಷೇತ್ರ ಮಾಡಲು ಬದ್ಧ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ, ನೆಲಮಂಗಲದ ಸ್ವಾಭಿಮಾನಿ ಮತದಾರರು ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ಅವರನ್ನು ಗೆಲ್ಲಿಸುವ ಭರವಸೆ ಇದೆ. ನೆಲಮಂಗಲ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ಅವರ ಪರವಾಗಿ ರೋಡ್ ಶೋ ನಡೆಸಿದ ಅವರು, ಕಾಂಗ್ರೆಸ್‌ನವರು ಹತಾಶರಾಗಿ ರಾಜ್ಯದಲ್ಲಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರು ಬಿಟ್ಟು ಹೋದ ಬೀಜ ಕಾಂಗ್ರೆಸ್. ಕಾಂಗ್ರೆಸ್ ಅವಧಿಯಲ್ಲಿ ದೇಶವನ್ನು ಲೂಟಿ ಮಾಡಿದ್ದರು. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದರು ಎಂದು ಹರಿಹಾಯ್ದರು.
ಏ.27ರವರೆಗೆ ವಿವಿಧೆಡೆ ಜಯವಾಹಿನಿ ಯಾತ್ರೆ
ಭಾನುವಾರ (ಏ.23) ಸಿಎಂ ಬಸವರಾಜ ಬೊಮ್ಮಾಯಿ ಅವರು ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಪ್ರಚಾರ ನಡೆಸಿದ್ದು, ಇದಾದ ನಂತರ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನು ಏ.24ರಂದು ದಾವಣಗೆರೆಯಿಂದ ರೋಡ್ ಶೋ ಆರಂಭವಾಗಲಿದ್ದು, ಹರಿಹರ, ರಾಣೆಬೆನ್ನೂರು, ಹಾವೇರಿ, ಬಂಕಾಪುರ, ಸವಣೂರು, ಶಿಗ್ಗಾಂವಿ, ಕುಂದಗೋಳದಲ್ಲಿ ಪ್ರಚಾರ ನಡೆಸಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ: Karnataka Election: ʼಹಾವಿನ ಹೆಡೆಯ ಮೇಲಿನ ಕಪ್ಪೆʼಯಂತೆ ಬಿಜೆಪಿ ಲಿಂಗಾಯತ ನಾಯಕರ ಸ್ಥಿತಿ: ಸಿದ್ದರಾಮಯ್ಯ
ಮೂರನೇ ದಿನ ಏ.25ರಂದು ಹುಬ್ಬಳ್ಳಿಯಲ್ಲಿ ಪ್ರಚಾರ ಆರಂಭಿಸಿ, ಕಿತ್ತೂರು, ಖಾನಾಪುರ, ಬೆಳಗಾವಿ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿಯಲ್ಲಿ ಪ್ರಚಾರ ನಡೆಸಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಇರಲಿದ್ದಾರೆ. ಬಳಿಕ ಏ.26ರಂದು ಯಮಕನ ಮರಡಿ, ಚಿಕ್ಕೋಡಿ, ನಿಪ್ಪಾಣಿ, ಅರಭಾವಿ, ಗೋಕಾಕ್, ಅಥಣಿ, ರಾಯಭಾಗ, ರಾಮದುರ್ಗದಲ್ಲಿ ಪ್ರಚಾರ ನಡೆಸಲಿದ್ದು, ನಂತರ ಏ. 28ರಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಪ್ರಚಾರ ನಡೆಸಿದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.