ಬೆಳಗಾವಿ: ಆಗಿಂದಾಗ್ಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಎಳೆದು ತರುವ ಕೆಲಸವನ್ನು ಸಚಿವ ಉಮೇಶ್ ಕತ್ತಿ ಈಗಲೂ ಮುಂದುವರಿಸಿದ್ದಾರೆ. 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಉಮೇಶ್ ಕತ್ತಿ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದ್ದು, ಪ್ರತ್ಯೇಕ ರಾಜ್ಯವನ್ನು ಬಿಜೆಪಿಯವರೇ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮೂರು ಕೋಟಿಗಿಂತ ಹೆಚ್ಚಿನ ಜನರಿದ್ದರೆ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬುದು ಬಿಜೆಪುಯವರ ಅಜೆಂಡಾದಲ್ಲೇ ಇದೆ. ಈ ಕುರಿತು ಸದ್ಯದಲ್ಲೆ ಬಿಜೆಪಿಯವರು ಮಸೂದೆಯನ್ನೂ ತರಲಿದ್ದಾರೆ ಎಂದರು.
ಈ ಕಾನೂನು ತಂದರೆ ಸ್ವಾಭಾವಿಕವಾಗಿ ಎರಡು ರಾಜ್ಯಗಳಾಗುತ್ತವೆ. ಹಿಂದೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಚಿಕ್ಕ ರಾಜ್ಯಗಳಾದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಪ್ರತ್ಯೇಕ ರಾಜ್ಯವೆನ್ನುವ ಪ್ರಶ್ನೆ ಬೇರೆ, ಈ ವಿಚಾರ ಬೇರೆ. ಇದು ಹೋರಾಟ ಮಾಡಿ ಪ್ರತ್ಯೇಕ ರಾಜ್ಯ ಪಡೆಯುವುದಲ್ಲ. ಪ್ರತ್ಯೇಕ ರಾಜ್ಯ ಮಾಡಬೇಕೆಂಬುದು ಬಿಜೆಪಿ ಅಜೆಂಡಾದಲ್ಲೇ ಇದೆ. ಇದರ ಬಗ್ಗೆ ಈಗಲೇ ಚರ್ಚೆ ಬೇಡ. ಕಾನೂನು ಬಂದಾಗ ಚರ್ಚಿಸಿದರಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ನಾನು 65 ವರ್ಷದ ಯುವಕ, 75ರವರೆಗೂ Young: CM ಆಗುವ ಅವಕಾಶವಿದೆ ಎಂದ ಉಮೇಶ್ ಕತ್ತಿ
ಬೆಂಗಳೂರಿನ ಬಳಿ ಭಿಕ್ಷೆ ಬೇಡಬೇಕು
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಬೆಂಗಳೂರವರ ಬಳಿ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಉಮೇಶ್ ಕತ್ತಿ ಹಾಗೂ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಕನ್ನಡ ಪರ ಹೋರಾಟಗಾರ ಅಶೋಕ್ ಚಂದರಗಿ ಆಕ್ರೋಶ ಹೊರ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳಿಲ್ಲ, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಅನುಷ್ಠಾನ ಆಗಿಲ್ಲ. ರಾಜ್ಯದ ಒಟ್ಟಾರೆ ಆದಾಯದಲ್ಲಿ 51% ಬೆಂಗಳೂರು ಮಹಾನಗರದಿಂದ ಬರುತ್ತದೆ. ಉಮೇಶ್ ಕತ್ತಿಯವರು ಇಂತಹ ಅಸಮಂಜಸ, ಅಯೋಗ್ಯ ಹೇಳಿಕೆ ನೀಡಬಾರದು ಎಂದು ಹೇಳಿದರು.
ಅಖಂಡ ಕರ್ನಾಟಕ ಕಲ್ಪನೆ, ಕರ್ನಾಟಕ ಏಕೀಕರಣ ಚಳವಳಿ ಬಗ್ಗೆ ತಿಳಿದುಕೊಳ್ಳಬೇಕು. ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸ್ಪಷ್ಟಪಡಿಸಬೇಕು ಎಂದರು.
ಸತೀಶ್ ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್ ಚಂದರಗಿ, ಮೂರು ಕೋಟಿ ಜನಸಂಖ್ಯೆಗೆ ಒಂದು ರಾಜ್ಯ ಆಗಬೇಕು ಎಂದು ಮೋದಿ ಯಾವುದೋ ಸಂದರ್ಭದಲ್ಲಿ ಹೇಳಿದ್ದಾರೆ. ಸಣ್ಣ ರಾಜ್ಯ ಆದ ತಕ್ಷಣ ಅದು ಅಭಿವೃದ್ಧಿ ಆಗುತ್ತದೆ ಎನ್ನುವುದು ತಪ್ಪು. ಆಡಳಿತಾತ್ಮಕ ಸುಧಾರಣೆ ತರುವ ಮೂಲಕ ರಾಜ್ಯಗಳ ಅಭಿವೃದ್ಧಿ ಮಾಡಬೇಕು. ಸಣ್ಣ ಸಣ್ಣ ರಾಜ್ಯಗಳಾಗಿ ಆಯಾ ಆಡಳಿತ ಪಕ್ಷಗಳು ನಿಮ್ಮ ಮುಖ್ಯಮಂತ್ರಿಗಳನ್ನು ಕೂರಿಸಲು ಅನುಕೂಲ ಆಗಬಹುದು. ರಾಜ್ಯಗಳ ವಿಂಗಡಣೆಗೆ ಕಾನೂನು ತರವುದು ಅಷ್ಟು ಸುಲಭದ ಮಾತಲ್ಲ. ಕಾನೂನು ಬರುವ ಮೊದಲೇ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | MLC election | ಶಾಂತಿಯುತವಾಗಿ ಮುಗಿಯಿತು ಚುನಾವಣೆ, ಅನಿಲ್ ಬೆನಕೆ ಮೇಲೆ ಎಫ್‌ಐಆರ್