ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ (BK Hariprasad) ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದು, ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯ ವೈಖರಿ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ, ದೇವರಾಜ್ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸಿಎಂ, ಡಿಸಿಎಂ ಹೆಸರು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿದ್ದಾರೆ. ನಾವು ದೇವರಾಜ ಅರಸು ಕಾಲದಲ್ಲಿ ಬಂದವರು. ಅಶೋಕ್ ಪಟ್ಟಣ್, ನಜೀರ್ ಅವರೆಲ್ಲಾ ಅರಸು ಅವರ ಜತೆಗೆ ಇದ್ದರು. ನಾವು ವಿರೋಧಿಗಳ ಬಣದಲ್ಲಿದ್ದವರು. ಆದರೂ ಕರೆದು ಮಾತನಾಡಿಸುವವರು. ನೀವು ಕಪಿಗಳು, ಕಪಿಚೇಷ್ಠೆ ಮಾಡುತ್ತಿದ್ದೀರಾ. ಇದರಿಂದ ವಿಪಕ್ಷಗಳಿಗೆ ಅನುಕೂಲ ಆಗುತ್ತದೆ. ಆದರೂ ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಅರಸು ಹೇಳುತ್ತಿದ್ದರು. ಈಗ ಕರೆದು ಮಾತನಾಡುವುದು ಇರಲಿ, ವಿರೋಧಿಗಳ ತರಹ ಅಲ್ಲ, ಶತ್ರುಗಳಂತೆ ನೋಡುತ್ತಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ | BJP Politics : ಎಸ್.ಟಿ. ಸೋಮಶೇಖರ್ ಮುನಿಸಿಗೆ ವಿಕೆಟ್ ಪತನ; ಮಾರೇಗೌಡ ಆ್ಯಂಡ್ ಟೀಂ ಉಚ್ಚಾಟನೆ!
ಮಾಜಿ ಸಿಎಂ ಡಿ. ದೇವರಾಜ ಅರಸು ಅವರು ಸಣ್ಣ ಸಮುದಾಯಗಳನ್ನು ಗುರುತಿಸುತ್ತಿದ್ದರು. ಹಿಂದುಳಿದ ವರ್ಗ ಎಂದರೆ ಒಂದು ಜಾತಿಯಲ್ಲ, ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು. ಇಲ್ಲವೆಂದರೆ ಮನೆಗೆ ಕಳುಹಿಸುತ್ತಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ರಕ್ಷಣೆ ಕೊಟ್ಟರೆ ಮಾತ್ರ ಪಕ್ಷ ಉಳಿಯುತ್ತೆ, ಇಲ್ಲದಿದ್ದರೆ ಉಳಿಯಲ್ಲ. ನಮಗೆ ಬಲ ಇದೆ ಎಂದು ರಾಜಕಾರಣ ಮಾಡಿದರೆ ಆಗಲ್ಲ, ಎಲ್ಲರನ್ನೂ ಸೇರಿಸಿಕೊಂಡು ರಾಜಕಾರಣ ಮಾಡಬೇಕು ಎಂದು ಹೇಳಿದ್ದಾರೆ.
ಕಾರ್ಯಕರ್ತರ ಮದುವೆ ಅಂದರೆ ಅರಸು ತಾವು ಹೋಗಿಲ್ಲ ಎಂದರೂ ಅಂದಿನ ರಾಜಕೀಯ ಕಾರ್ಯದರ್ಶಿಕಡೆಯಿಂದ 10-15 ಸಾವಿರ ಕೊಟ್ಟು ಕಳುಹಿಸುತ್ತಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಕಾರ್ಯಕರ್ತರ ರಕ್ಷಣೆ ಮಾಡಬೇಕು. ಇಲ್ಲವೆಂದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ. ಬ್ಯಾಗ್ ಹಿಡಿದುಕೊಂಡು ಹೋದವರು ನಾಯಕರಾಗುತ್ತಾರೆ ಎಂದು ಆಗುತ್ತಾರೆ ಎಂದು ತಿಳಿಸಿದ್ದಾರೆ.
ಬೋಸರಾಜು, ನಜೀರ್ ಅಹ್ಮದ್, ರೇವಣ್ಣ ಹಾಗೂ ನಾನು ಅರಸು ಕಾಲದಲ್ಲಿ ಬಂದವರು. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕು ಎಂದು ಎನ್‌ಎಸ್‌ಯುಐ ಅಧ್ಯಕ್ಷರು ಹೇಳಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮರೆತಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಮಾಡುತ್ತೇವೆ ಎಂದಿದ್ದೇವೆ. ಈಗ ವಿವಿಗಳಲ್ಲಿ ಚುನಾವಣೆ ನಡೆಸಿ ಎಂದು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ | Cauvery Dispute: ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿ ಈಗ ಕಾವೇರಿ ನೀರು ಬಿಟ್ಟಿದ್ದಾರೆ: ಎಚ್‌ಡಿಕೆ ಕಿಡಿ
ಹಾಗೆಯೇ ವಿವಿಗಳಲ್ಲಿ ಚುನಾವಣೆ ನಡೆದರೆ ಮಾತ್ರ ನಿಜವಾದ ಲೀಡರ್ ಹುಟ್ಟುತ್ತಾನೆ. ಮತ್ತೆ ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ತನ್ನಿ. ಇಲ್ಲದೇ ಹೋದರೆ ನಾಯಕರ ಹಿಂದೆ ಓಡಾಡುವರೇ ನಾಯಕ ಆಗುತ್ತಾರೆ. ಅಶೋಕ್ ಪಟ್ಟಣ್ ಗ್ರ್ಯಾಜುಯೇಟ್ ಅಲ್ಲ, ಆದರೂ ಲೀಡರ್. ವಿವಿಗಳಲ್ಲಿ ಚುನಾವಣೆ ನಡೆದರೆ ನಿಜವಾದ ಲೀಡರ್‌ಗಳು ಹೊರಗೆ ಬರುತ್ತಾರೆ ಎಂದು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.