Site icon Vistara News

BKS Varma Death: ಜ್ಯೇಷ್ಠ ಕಲಾವಿದ, ವಿದ್ವಾಂಸ ಬಿ.ಕೆ.ಎಸ್. ವರ್ಮಾ ನಿಧನದ ಸುದ್ದಿ ಅತೀವ ದುಃಖ ತಂದಿದೆ: ವಿ. ನಾಗರಾಜ್

BKS Varma Death

#image_title

ಬೆಂಗಳೂರು: ಬಿ.ಕೆ.ಎಸ್. ವರ್ಮಾ ಅವರ ಕಲಾಕೃತಿಗಳ ಉತ್ಕೃಷ್ಟತೆ, ಭಾವಾಭಿವ್ಯಕ್ತಿ ಮತ್ತು ಜೀವಂತಿಕೆಯು ಕಲೆಯ ಮೂಲಕ ದೈವತ್ವದೆಡೆಗೆ ಸಾಗುವ ಮಹತ್ ಸಂಕಲ್ಪದ ಅಭಿವ್ಯಕ್ತಿಯಾಗಿತ್ತು. ಜ್ಯೇಷ್ಠ ಕಲಾವಿದ, ವಿದ್ವಾಂಸ ಬಿ.ಕೆ.ಎಸ್. ವರ್ಮಾ (BKS Varma Death) ಅವರ ನಿಧನದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲೆಯ ಅನೇಕ ಆಯಾಮಗಳನ್ನು ಅನ್ವೇಷಿಸಿದ್ದ ಅವರು ಸಾಂಪ್ರದಾಯಿಕವಾದ ಕಲೆಗಳ ಆರಾಧಕರಾಗಿದ್ದರು. ಅಷ್ಟೇ ಅಲ್ಲದೆ ಹೊಸ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಿದ್ದ ಅವರು ಅತ್ಯಂತ ಸರಳ ಮತ್ತು ಸಾತ್ವಿಕ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡ ಅವರ ಕಲಾಕೃತಿಗಳು ಕಲಾಸಕ್ತರ, ವಿಮರ್ಶಕರ, ಸಹೃದಯ ಸಾಮಾನ್ಯರ ಜನಜೀವನದ ಭಾಗವೇ ಆಗಿ ಹೋಗಿತ್ತು. ಅವರ ಕುಂಚದಲ್ಲಿ ಮೂಡಿಬಂದ ಭುವನೇಶ್ವರಿದೇವಿ, ರಾಘವೇಂದ್ರ ಸ್ವಾಮಿ, ಶಾರದೆ, ಗಣಪತಿ ಮುಂತಾದ ಅತ್ಯದ್ಭುತ ಚಿತ್ರಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | BKS Varma Death | ಬಿ.ಕೆ.ಎಸ್‌. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದ ಅವರು ಸಂಸ್ಕಾರ ಭಾರತಿಯ ಪ್ರಾರಂಭದ ದಿನಗಳಿಂದಲೂ ಚಟುವಟಿಕೆಗಳಿಗೆ ಪ್ರೋತ್ಸಾಹ-ಸಹಕಾರ ನೀಡಿದ್ದರು. ನೃತ್ಯ-ಕಾವ್ಯ-ಕುಂಚ ಎಂಬ ಹೊಸ ಪ್ರಯೋಗವನ್ನೂ ಸಂಸ್ಕಾರ ಭಾರತಿಯಿಂದ ಮಾಡುವುದಕ್ಕೆ ಪ್ರೇರಣೆ ನೀಡಿದವರು. ಅಲ್ಲದೆ ಅದರ ಮಾರ್ಗದರ್ಶಕ ಮಂಡಳಿಯಲ್ಲಿದ್ದು, ಅನೇಕ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿ, ಅವರನ್ನು ಕಲಾ ಜಗತ್ತಿಗೆ ಪರಿಚಯಿಸಿದ ಮಹನೀಯರು. ಬಿ.ಕೆ.ಎಸ್ ವರ್ಮಾ ಅವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ಅವರ ಕಲಾಕೃತಿಗಳ ಮೂಲಕ ಅಮರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಕಲಾಭಿಮಾನಿಗಳಿಗೆ ಆ ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

Exit mobile version