ಬೆಂಗಳೂರು: ಚರೈವೇತಿ ಚರೈವೇತಿ (Charaiveti Charaiveti), ಯಹೀ ತೋ ಮಂತ್ರ್ ಹೈ ಅಪ್ನಾ- ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಫೇಸ್ ಬುಕ್‌ನಲ್ಲಿ ಬರೆದುಕೊಂಡಿರುವ ಮಾತು. ಮಂಗಳವಾರ ದಿನವಿಡೀ ರಾಷ್ಟ್ರಾದ್ಯಂತ ಸುದ್ದಿಯಲ್ಲಿದ್ದವರು ಬಿ.ಎಲ್. ಸಂತೋಷ್. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ತನಗೆ ಟಿಕೆಟ್ ತಪ್ಪಿಸಿದ್ದು ಬಿ.ಎಲ್ ಸಂತೋಷ್ ಎಂದು ಆರೋಪಿಸಿದ್ದರು.
ʻʻನನಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್ ಅವರೇ ಕಾರಣ. ತಮ್ಮ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಕೊಡಿಸುವುದಕ್ಕಾಗಿ ಹಿರಿಯ ನಾಯಕನಾಗಿರುವ ನನ್ನನ್ನು ಮೂಲೆಗುಂಪು ಮಾಡಿದರು. ಸಂತೋಷ್ ಅವರಿಂದಾಗಿಯೇ ಮೈಸೂರಿನ ರಾಮದಾಸ್ ಸೇರಿದಂತೆ ಹಲವರಿಗೆ ಟಿಕೆಟ್ ಕೈತಪ್ಪಿದೆ. ಸಂತೋಷ್ ಅವರಿಂದಾಗಿ ರಾಜ್ಯದಲ್ಲಿ ಪಕ್ಷ ಮುಳುಗುತ್ತದೆʼʼ ಎಂದು ನೇರವಾಗಿ ಆರೋಪಿಸಿದ್ದರು.
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೆಲ್ಲ ಬಿ.ಎಲ್. ಸಂತೋಷ್ ಅವರ ಜನಗಳೇ ಎಂದು ಆಪಾದಿಸಿದ್ದ ಶೆಟ್ಟರ್, ಬಿ.ಎಲ್. ಸಂತೋಷ್ ಅವರು ಕೇರಳ ವಿಧಾನಸಭಾ ಚುನಾವಣೆಯ ಇನ್ಚಾರ್ಜ್ ಆಗಿದ್ರು. ಅಲ್ಲಿ ಒಂದೂ ಸೀಟ್ ಬರಲಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಕಳುಹಿಸಿದ್ರು. ಏನು ಪ್ರಯೋಜನವಾಗಿಲ್ಲ. ಈಗ ಕರ್ನಾಟಕದಲ್ಲಿ ಕಾರುಬಾರು ಮಾಡುತ್ತಿದ್ದಾರೆ. ಇಷ್ಟೊಂದು ವೈಫಲ್ಯ ಇರುವ ವ್ಯಕ್ತಿಗೆ ನಂಬರ್ ಒನ್, ನಂಬರ್ ಟು ವ್ಯಕ್ತಿಗಳು ಅವಕಾಶ ಕೊಟ್ಟಿದ್ದಾರೆʼʼ ಎಂದು ನೇರ ದಾಳಿ ಮಾಡಿದರು. ಹೀಗಾದರೆ ಬಿಜೆಪಿ ರಾಜ್ಯದಲ್ಲಿ ಮುಳುಗಿ ಹೋಗುತ್ತದೆ. ನಮ್ಮ ಕಣ್ಣೆದುರೇ ಹಾಳಾಗಿ ಹೋಗುತ್ತದೆ ಎಂದಿದ್ದರು.
ಬಿ.ಎಲ್. ಸಂತೋಷ್ ಅವರ ಮೇಲಿನ ನೇರ ದಾಳಿಗೆ ರಾಜ್ಯದ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸಿ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ನಡುವೆ ಬಿ.ಎಲ್. ಸಂತೋಷ್ ಅವರು ಫೇಸ್ ಬುಕ್‌ನಲ್ಲಿ ʻಚರೈವೇತಿ ಚರೈವೇತಿʼ ಎಂದು ಬರೆದುಕೊಂಡಿದ್ದಾರೆ.
ಏನಿದು ಚರೈವೇತಿ.. ಚರೈವೇತಿ?
ಬಿ.ಎಲ್. ಸಂತೋಷ್ ಅವರು ʻಚರೈವೇತಿ ಚರೈವೇತಿ.. ಯಹೀ ತೋ ಮಂತ್ರ್ ಹೈ ಅಪ್‌ನಾʼ ಎಂದು ಬರೆದುಕೊಂಡಿರುವುದರ ಹಿನ್ನೆಲೆ, ಅರ್ಥ ಮತ್ತು ಅದರ ಮೂಲದ ಬಗ್ಗೆ ಚರ್ಚೆ ಶುರುವಾಗಿದೆ. ನೇರವಾದ ಅರ್ಥದಲ್ಲಿ ಹೇಳುವುದಾದರೆ,
ʻಚರೈವೇತಿ ಚರೈವೇತಿ.. ಯಹೀ ತೋ ಮಂತ್ರ್ ಹೈ ಅಪ್‌ನಾʼ ಎಂದರೆ
ನಡೆಯುತ್ತಿರು.. ನಡೆಯುತ್ತಿರು.. ಇದುವೇ ಮಂತ್ರ ನನ್ನದು
ಇದನ್ನು ಮುನ್ನಡೆಯುತ್ತಿರು.. ಮುನ್ನಡೆಯುತ್ತಲೇ ಇರು.. ಇದುವೇ ನನ್ನ ಮಂತ್ರ ಎಂದೂ ಹೇಳಬಹುದು.
ಇದು ಜಗದೀಶ್ ಶೆಟ್ಟರ್ ಅವರ ಮಾತುಗಳಿಗೆ ನೀಡಿದ ಪ್ರತಿಕ್ರಿಯೆಯಂತೆ ಕಾಣುತ್ತಿದೆ. ನೀವು ಏನೇ ಹೇಳಿದರೂ ನಾನು ಅದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತಲೇ ಇರುತ್ತೇನೆ.. ಇದುವೇ ನನ್ನ ಮಂತ್ರ- ಎಂದು ಹೇಳಿದಂತಿದೆ.
ಎಲ್ಲಿಂದ ಬಂತು ಈ ಮಂತ್ರ?
ಚರೈವೇತಿ ಚರೈವೇತಿ ಎನ್ನುವ ಪದದ ಮೂಲವಿರುವುದು ಐತರೇಯ ಬ್ರಾಹ್ಮಣ ಎಂಬ ಉಪನಿಷತ್ ಭಾಗದಲ್ಲಿ.
ಇದೊಂದು ಋಷಿವಾಕ್ಯ, ಮಹಿದಾಸ ಎನ್ನುವ ಋಷಿ ಹೇಳಿದ್ದು ಎನ್ನಲಾತ್ತಿದೆ.
ಕಲಿಃ ಶಯಾನೋ ಭವತಿ ಸಂಜಿಹಾನಸ್ತು ದ್ವಾಪರಃ |
ಉತ್ತಿಷ್ಠಂಸ್ತ್ರೇತಾ ಭವತಿ ಕೃತಂ ಸಂಪದ್ಯತೇ ಚರನ್ ||
ಚರೈವೇತಿ ಚರೈವೇತಿ
ಯಾರು ಮಲಗಿರುವನೋ ಆತ ಕಲಿಯುಗದವನು,
ಯಾರು ಹಾಸಿಗೆಯನ್ನು ತ್ಯಜಿಸಿರುವನೋ ಅವನು ದ್ವಾಪರಯುಗದವನು
ಯಾರು ಎದ್ದು ನಿಲ್ಲುವನೋ ಅವನು ತ್ರೇತಾಯುಗ ನಿರ್ಮಿಸುವನು.
ಮುನ್ನಡೆಯುವವನು ಕೃತಯುಗವನ್ನು ತರುವನು.
ಆದ್ದರಿಂದ ಮುನ್ನಡೆಯಿರಿ, ಮುನ್ನಡೆಯಿರಿ, ನಿರಂತರವಾಗಿ ಮುನ್ನುಗ್ಗಿ ಎನ್ನುವುದು ಇದರ ವಿಸ್ತಾರ ರೂಪ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಯೂ ಇದೆ
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಚರೈವೇತಿ ಚರೈವೇತಿ ಯಹೀ ತೋ ಮಂತ್ರ್ ಹೈ ಅಪ್ನಾ ಎನ್ನುವ ಗೀತೆ ಇದೆ.
ಇದು ಮುಂದುವರಿದು ಎಲ್ಲರೂ ನಿಲ್ಲದಿರು, ಎಲ್ಲೂ ದಣಿಯದಿರು, ನಿರಂತರವಾಗಿ ನಡೆಯುತ್ತಿರು.. ಇದುವೇ ನಿನ್ನ ಮಂತ್ರವಾಗಿರಲಿ, ಶುಭಕಾರಕ ಮಂತ್ರವಾಗಿರಲಿ ಎನ್ನುತ್ತದೆ.
ನಮಗೆ ಪ್ರೇರಣೆಯು ಆ ಭಾಸ್ಕರ, ಅವನ ರಥದ ಚಲನೆ ನಿರಂತರ
ಯುಗಾಂತರಗಳಿಂದ ಅವನದು ನಿತ್ಯಯಾನ, ಪ್ರಖರ ಬೆಳಕದು ಸನಾತನ
ಚಲನೆಯೇ ನನ್ನ ಧರ್ಮ, ನಿಂತರ ಭ್ರಮಣವೇ ಕರ್ಮ
ಇದುವೇ ನನ್ನ ಮಂತ್ರವು, ನನ್ನ ಶುಭಕಾರಕ ಮಂತ್ರವು
ಎನ್ನುವ ಅರ್ಥದ ಸಾಲುಗಳು ಇಲ್ಲಿವೆ.
ಇದನ್ನೂ ಓದಿ : Karnataka Elections 2023: ನನಗೆ ಟಿಕೆಟ್ ತಪ್ಪಿಸಿದ್ದು ಬಿ.ಎಲ್ ಸಂತೋಷ್, ಇವರಿಂದ್ಲೇ ಬಿಜೆಪಿ ಮುಳುಗೋದು; ಶೆಟ್ಟರ್ ಚಾರ್ಜ್‌ಶೀಟ್