Site icon Vistara News

12 ತಿಂಗಳಲ್ಲಿ 41 ಸಾವಿರ ಬೂತ್​ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ: ಬಿಜೆಪಿ ಸೋಲಿನ ನಂತರ ಬಿ.ಎಲ್. ಸಂತೋಷ್​ ಪೋಸ್ಟ್​

BL Santosh Facebook Post After BJP defeat in Karnataka Assembly Election

#image_title

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಬಿಜೆಪಿ ಪಕ್ಷ ಸೋತು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಈ ಸಲ ಬಿಜೆಪಿಗೆ ಬರೀ ಸೋಲಲ್ಲ. ಒಂದು ಬಲವಾದ ಹೊಡೆತವೇ ಬಿದ್ದಂಥ ಫಲಿತಾಂಶ ಬಂದಿದೆ. ಘಟಾನುಘಟಿ ನಾಯಕರೇ ಕಾಂಗ್ರೆಸ್ ಎದುರು ಮಂಡಿಯೂರಿದ್ದಾರೆ. ಬಿಜೆಪಿ ಎಡವಿದ್ದೆಲ್ಲಿ? ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಯಿತಾ? ಎಂಬಿತ್ಯಾದಿ ಚರ್ಚೆಗಳ ಮಧ್ಯೆ, ಆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರ ವಿರುದ್ಧ ಕಾಂಗ್ರೆಸ್ ಟೀಕೆ ಮಾಡಿತ್ತು. ಕಾಂಗ್ರೆಸ್​ನ ಟೀಕೆಗೆ ಬಿ.ಎಲ್.ಸಂತೋಷ್ (BL Santhosh) ಅವರು ಫೇಸ್​ಬುಕ್ ಪೋಸ್ಟ್​ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

‘ಕಲಿಯುತ್ತೇವೆ-ಸೋಲಿನಿಂದ , ಹಿನ್ನಡೆಗಳಿಂದ , ತಪ್ಪುಗಳಿಂದ
ಉತ್ತರಿಸುತ್ತೇವೆ-ಟೀಕೆಗಳಿಗೆ, ಕುಹಕಗಳಿಗೆ , ಒಡಕು ಮಾತುಗಳಿಗೆ
ನಮ್ಮ ಗತಿಶೀಲತೆಯಿಂದ
ನಾವು ಇರಲಿಕ್ಕೇ ಬಂದವರು … ಗೆಲ್ಲಲಿಕ್ಕೇ ಬಂದವರು …
ನಮಗೆ ಸೋಲು ಕ್ಷಣಿಕ … ಮುನ್ನಡೆ ಸತತ -ಇನ್ನು 12 ತಿಂಗಳಿನೊಳಗೆ 31000 ಕ್ಕೆ ಮತ್ತೆ 10000 ಸೇರಿಸಿ 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ‘ ಎಂದು ಪೋಸ್ಟ್ ಹಾಕಿದ್ದಾರೆ‘

ಮೇ 10ರಂದು ಚುನಾವಣೆ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದವು. ಎಲ್ಲದರಲ್ಲೂ ಬಹುತೇಕ ಕಾಂಗ್ರೆಸ್​​ಗೇ ಹೆಚ್ಚಿನ ಸೀಟ್​ಗಳನ್ನು ತೋರಿಸಲಾಗಿತ್ತು. ಹೀಗೆ ಎಕ್ಸಿಟ್​ ಪೋಲ್​ ಹೊರಬಿದ್ದ ಬೆನ್ನಲ್ಲೇ ಮಾತನಾಡಿದ್ದ ಬಿ.ಎಲ್.ಸಂತೋಷ್​ ಅವರು, ‘ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ. ಈ ಸಲ ಬಿಜೆಪಿ 31 ಸಾವಿರ ಬೂತ್​​ಗಳಲ್ಲಿ ಮುನ್ನಡೆ ಸಾಧಿಸುತ್ತದೆ’ ಎಂದು ಹೇಳಿದ್ದರು. ಮೇ 13ರಂದು ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿ ಸಂತೋಷ್​ರನ್ನು ಟೀಕೆ ಮಾಡಿತ್ತು.

‘ಬಿ.ಎಲ್.ಸಂತೋಷ್​ ಅವರೇ, ಸೌಖ್ಯವೇ, ಸಂತೋಷವೇ?!, ಅಂದಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ?’ ಎಂದು ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡಿತ್ತು. ಅದಕ್ಕೀಗ ಬಿ.ಎಲ್.ಸಂತೋಷ್​ ತಿರುಗೇಟು ನೀಡಿದ್ದಾರೆ. ಇನ್ನೊಂದು ವರ್ಷದ ಅವಧಿಯಲ್ಲಿ 41 ಸಾವಿರ ಬೂತ್​​ಗಳಲ್ಲಿ ಮುನ್ನಡೆ ಪಡೆಯಲಿದ್ದೇವೆ ಎಂದಿದ್ದಾರೆ. ಬಿ.ಎಲ್.ಸಂತೋಷ್ ಪೋಸ್ಟ್​ನ ಒಳಾರ್ಥದ ಬಗ್ಗೆ ಕುತೂಹಲ ಮೂಡಿದೆ. ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಬಗ್ಗೆ ಹೀಗೆ ಹೇಳಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿ.ಎಲ್. ಸಂತೋಷ್‌ ವಿರುದ್ಧ ಪೋಸ್ಟ್‌: ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್‌, ಒಬ್ಬನ ಬಂಧನ

Exit mobile version