Site icon Vistara News

Black Day | ದ.ಕ., ಉ.ಕ, ಉಡುಪಿ, ಬಾಗಲಕೋಟೆಯಲ್ಲಿ ರಸ್ತೆ ಅಪಘಾತ; ಶಾಲಾ ಬಾಲಕ ಸೇರಿ ಮೂವರ ಸಾವು, ಹಲವರು ಗಂಭೀರ

ಮಂಗಳೂರು/ಕಾರವಾರ/ಉಡುಪಿ/ಬಾಗಲಕೋಟೆ: ಮಂಗಳವಾರ (ಡಿ. ೨೭) ರಾಜ್ಯದ ಹಲವು ಕಡೆ ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ವರದಿಯಾಗಿವೆ. ಮಂಗಳೂರಿನ ಉಳ್ಳಾಲ ತಾಲೂಕಿನ ಮುಡಿಪು ಎಂಬಲ್ಲಿ ಕಾರು ಹರಿದು ಶಾಲಾ ಬಾಲಕನೊಬ್ಬ (Black Day) ಮೃತಪಟ್ಟಿರುವ ಘಟನೆ ನಡೆದಿದೆ.

ಶಾಲಾ ಬಾಲಕ ರಸ್ತೆ ದಾಟುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿ ಅಸುನೀಗಿದ್ದಾನೆ. ಇತ್ತ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದರು. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಮತ್ತೊಂದು ಕಡೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬಳಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಆಗಿದೆ. ಎರಡೂ ಬಸ್ ಚಾಲಕರಿಗೆ ಗಂಭೀರ ಗಾಯಗಳಾಗಿವೆ. ಸಿಂದನೂರು ಶಾಲಾ ಮಕ್ಕಳ ಪ್ರವಾಸದ ಖಾಸಗಿ ಬಸ್ ಇದಾಗಿದ್ದು, ಧರ್ಮಸ್ಥಳದಿಂದ ನೆಲ್ಯಾಡಿ ಕಡೆ ಬರುತ್ತಿತ್ತು. ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲ್ಯಾಡಿ ಹಾಗೂ ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಚಾಲಕ ಸಾವು
ರಸ್ತೆ ಬದಿ ಲಾರಿಯ ಟೈರ್ ಪಂಚರ್ ತೆಗೆಯುತ್ತಿದ್ದ ಚಾಲಕನಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ದುಂಡಕುಳಿ ಗ್ರಾಮದಲ್ಲಿ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ದೇಹ ಛಿದ್ರವಾಗಿತ್ತು. ವೇಗವಾಗಿ ಬಂದ ಸರಕು ಸಾಗಣೆ ಲಾರಿಯು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌-ಆಟೋ ನಡುವೆ ಮುಖಾಮುಖಿ ಡಿಕ್ಕಿ
ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಅಪಘಾತ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಬಳಿ ಘಟನೆ ನಡೆದಿದೆ. ಆಟೋ ಚಾಲಕ ಜಟ್ಟಾ ನಾಯ್ಕ, ಪ್ರಯಾಣಿಕರಾದ ಜಯಂತಿ ಪೈ ಅವರಿಗೆ ಗಂಭೀರ ಗಾಯಗೊಂಡಿದ್ದಾರೆ. ಜತೆಗೆ ಹಳಿಯಾಳ ಮೂಲದ ಸತೀಶ ಹುನ್ಸ್ನಾಡ್ಕರ್, ಸೌಮ್ಯ ಹುನ್ಸ್ನಾಡ್ಕರ್, ಹಲ್ಯಾಣಿ ನಿವಾಸಿ ಮಹಾಲಕ್ಷ್ಮಿ ಕಿಣಿ ಎಂಬುವವರಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಗಾಯಗೊಂಡವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಟೋ ಭಟ್ಕಳದಿಂದ ಹಲ್ಯಾಣಿ ಗ್ರಾಮಕ್ಕೆ ತೆರಳುತ್ತಿದ್ದರೆ, ಡಿಪೋದಿಂದ ಭಟ್ಕಳಕ್ಕೆ ಹೊರಟಿದ್ದ ಬಸ್ ಮುಖಾಮುಖಿ ಡಿಕ್ಕಿ ಆಗಿದೆ. ಸ್ಥಳಕ್ಕೆ ಭಟ್ಕಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಗುದ್ದಿದ ಕಾರು
ಬಾಗಲಕೋಟೆಯ ಉದ್ಯಾನಗಿರಿಯ ತೋಟಗಾರಿಕಾ ವಿವಿ ಸಮೀಪ ಕ್ಯಾಂಟರ್‌ ವಾಹನಕ್ಕೆ ಹಿಂಬದಿಯಿಂದ ಕಾರು ಬಂದು ಗುದ್ದಿದೆ. ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಗೊಂಡ ಚಾಲಕನನ್ನು 108 ವಾಹನದ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೈಕ್‌ಗೆ ಕ್ರೇನ್ ಡಿಕ್ಕಿಯಾಗಿ ಹಿಂಬದಿ ಸವಾರ ಸಾವು
ಉಡುಪಿಯ ಕುಂದಾಪುರ ಸಮೀಪದ ಬಳ್ಕೂರು ಪಾನಕದ ಕಟ್ಟೆ ಬಳಿ ದ್ವಿಚಕ್ರ ವಾಹನಕ್ಕೆ ಕ್ರೇನ್ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಹುಣಸೆಮಕ್ಕಿ ಹೊಂಬಾಡಿ ನಿವಾಸಿ ಪ್ರಶಾಂತ್ ಮೊಗವೀರ (31) ಮೃತಪಟ್ಟವರು. ದಿನೇಶ್ ಎಂಬುವವರೊಂದಿಗೆ ಬೈಕ್‌ನಲ್ಲಿ ಕುಂದಾಪುರದಿಂದ ಸಿದ್ದಾಪುರಕ್ಕೆ ತೆರಳಿತ್ತಿದ್ದಾಗ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ರಸ್ತೆಗುರುಳಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ ಮೃತಪಟ್ಟಿದ್ದರೆ, ಸವಾರ ದಿನೇಶ್‌ಗೆ ಗಾಯಗಳಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇತ್ತ ಅಪಘಾತದ ಬಳಿಕ ಕ್ರೇನ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Prahlad Modi | ಬಂಡೀಪುರಕ್ಕೆ ಹೊರಟಿದ್ದ ಮೋದಿ ಸಹೋದರನ ಕುಟುಂಬದ ಕಾರು ಅಪಘಾತ; ಮಗುವಿನ ಕಾಲು ಮೂಳೆ ಕಟ್‌, ಉಳಿದವರು ಪಾರು

Exit mobile version