ಕಾರ್ಕಳ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರದಲ್ಲಿ (Ayodhya Rama Mandir) ಪ್ರತಿಷ್ಠಾಪನೆಯಾಗುವ ರಾಮ ಲಲ್ಲಾನ ಮೂರ್ತಿಗಾಗಿ ನೇಪಾಳದ ಗಂಡಕಿ ನದಿಯಿಂದ ಸಾಲಿಗ್ರಾಮ ಶಿಲೆಯನ್ನು ತಂದಿರುವುದು ಎಲ್ಲರಿಗೂ ಗೊತ್ತು. ಈ ದೇವಸ್ಥಾನಕ್ಕೆ ನಾನಾ ಕಡೆಗಳಿಂದ ಅತ್ಯಂತ ಜತನದಿಂದ ಆಯ್ದ ಶಿಲೆ ಮತ್ತು ಸಾಮಗ್ರಿಗಳನ್ನೇ ಬಳಸಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ದೇಶದ ನಾನಾ ಭಾಗಗಳಿಂದಲೂ ಆಯ್ದ ಶಿಲೆಗಳು, ಇತರ ವಸ್ತುಗಳು ರವಾನೆಯಾಗುತ್ತಿವೆ. ಅಂತೆಯೇ ಕರಿಕಲ್ಲಿಗಾಗಿ ಅನ್ವರ್ಥ ನಾಮವನ್ನು ಪಡೆದ ಕಾರ್ಕಳದಿಂದಲೂ ಶಿಲೆಯೊಂದನ್ನು ರವಾನಿಸಲಾಗಿದೆ. ಆ ಮೂಲಕ ರಾಮ ಮಂದಿರದ ನಿರ್ಮಾಣದಲ್ಲಿ ಇಲ್ಲಿನ ಶಿಲೆಯೂ ಭಾಗಿಯಾಗುವಂತಾಗಿದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿಯವರ ಜಾಗದಲ್ಲಿದ್ದ ನೆಲ್ಲಿಕಾರು ಶಿಲೆಯನ್ನು ಗುರುವಾರ ರಾತ್ರಿ ಬೃಹತ್ ಲಾರಿಯ ಮೂಲಕ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ. ಕೆಲವು ತಿಂಗಳುಗಳ ಹಿಂದೆ ಖ್ಯಾತ ಶಿಲಾ ತಜ್ಞ ಕುಶೀಪ್ ಬನ್ಸಾಲ್ ಅವರು ಈದುವಿಗೆ ಬಂದು ಈ ಶಿಲೆಯನ್ನು ಪರಿಶೀಲಿಸಿದ್ದರು. ದೇಶಾದ್ಯಂತ ನಡೆಯುವ ಶೋಧ ಕಾರ್ಯದ ಭಾಗವಾಗಿ ಇಲ್ಲಿಯೂ ಹುಡುಕಾಟ ನಡೆದಿತ್ತು. ಅವರಿಗೆ ಸ್ಥಳೀಯ ಶಿಲ್ಪಿಗಳು ಮತ್ತು ಬಜರಂಗದಳ ಕಾರ್ಯಕರ್ತರು ನೆರವಾಗಿದ್ದರು.
ಅಯೋಧ್ಯೆಗೆ ರವಾನೆಯಾದ ಶಿಲೆಯು ಸುಮಾರು 9 ಟನ್ ತೂಕವಿದೆ. 7 ಅಡಿ ಅಗಲ ಮತ್ತು 5 ಅಡಿ ದಪ್ಪವಿದೆ. ಕ್ರೇನ್ ಸಹಾಯದಿಂದ ಇದನ್ನು ಲಾರಿಗೆ ಹಾಕಲಾಯಿತು. ಬಳಿಕ ಅದ್ಧೂರಿ ಪೂಜೆಯೊಂದಿಗೆ ಕಳುಹಿಸಿಕೊಡಲಾಯಿತು.
ಕಾರ್ಕಳ ಕಲ್ಲಿಗೇ ಫೇಮಸ್
ಕಾರ್ಕಳದ ಕರಿಕಲ್ಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ. ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಭಾರಿ ಜನಪ್ರಿಯ. ರಾಷ್ಟ್ರಪತಿ ಭವನದಲ್ಲಿ ಇಡಲಾಗಿರುವ ಕಾರ್ಕಳದ ಬಾಹುಬಲಿ, ಮಾನಸ್ತಂಭದ ಪ್ರತಿಕೃತಿಗಳು ನೆಲ್ಲಿಕಾರು ಶಿಲೆಯಿಂದ ಮಾಡಲಾಗಿದ್ದು. ಕವಿ ಮುದ್ದಣ, ಮಿಥುನ ನಾಗ, ಸೋಮನಾಥ ಪುರದ ದ್ವಾರ , ಗಜಸಿಂಹ, ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರ ಸೇರಿದಂತೆ ಒಟ್ಟು ಹತ್ತು ವಿಗ್ರಹಗಳನ್ನು ಕರಿಕಲ್ಲಿನಿಂದ ಮಾಡಿ ಇಡಲಾಗಿದೆ. ದೆಹಲಿಯ ಗುರುಗ್ರಾಮ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹವೂ ಕರಿಕಲ್ಲಿನದ್ದೆ. ದೆಹಲಿಯಲ್ಲಿರುವ ಮಹಾವೀರನ ಪ್ರತಿಮೆ, ರಾಜಸ್ಥಾನದ ಅಲ್ವಾರ್ ಚಂದ್ರಪ್ರಭಾ ತೀರ್ಥಂಕರರ ಪ್ರತಿಮೆ, ಗುರುವಾಯೂರಿನ ಶ್ರೀಕೃಷ್ಣ, ಕೆನಡಾದ ಟೊರಂಟೊದಲ್ಲಿರುವ ದೇವೇಂದ್ರ ದೇವರ ವಿಗ್ರಹ, ಜಪಾನ್ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿರುವ ಕೃಷ್ಣನ ವಿಗ್ರಹವೂ ಕರಿಕಲ್ಲಿನದ್ದೆ. ಇತ್ತೀಚೆಗೆ ಮಲೇಷಿಯಾದಲ್ಲಿ ದುರ್ಗ ವಿಗ್ರಹವನ್ನು ನಿರ್ಮಿಸಲಾಗಿದೆ.
ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾದ ಕಾರ್ಕಳದ ಪುಣ್ಯ ಮಣ್ಣಿನಲ್ಲಿ, ಬ್ರಹ್ಮಬೈದರ್ಕಳ ಆರಾಧನೆ ಮಾಡುವ ಕುಟುಂಬವೊಂದರ ಭೂಮಿಯಲ್ಲಿದ್ದ ತುಳುನಾಡಿನ ಕೃಷ್ಣ ಶಿಲೆಗೆ ಅಯೋಧ್ಯೆಯ ರಾಮ ಮಂದಿರದ ಭಾಗವಾಗುವ ಯೋಗ ಬಂದಿರುವುದು ವಿಶೇಷ ಎನ್ನುತ್ತಾರೆ ಈದುವಿನ ನಾಗರಿಕರು.
ಇದನ್ನೂ ಓದಿ : Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿವೆ ನೂತನ ಫೋಟೊಗಳು