ಬೆಂಗಳೂರು: ದಾರಿಯಲ್ಲಿ ಹೋಗುವಾಗ ಅಪರಿಚಿತರು ಬಂದು ನನ್ನ ಮೊಬೈಲ್ ಕೆಟ್ಟು ಹೋಗಿದೆ. ತುರ್ತಾಗಿ ಒಬ್ಬರಿಗೆ ಕಾಲ್ ಮಾಡಬೇಕು. ಸ್ವಲ್ಪ ನಿಮ್ಮ ಫೋನ್ ಕೊಡಿ ಎಂದು ಕೇಳಿದರೆ ಕೊಂಚ ಎಚ್ಚರವಾಗಿರಿ. ಯಾಕೆಂದರೆ ಸಹಾಯ ಕೇಳುವ ನೆಪದಲ್ಲಿ ನಿಮಗೆ ಸಂಕಷ್ಟವನ್ನು (blackmail news) ತಂದೊಡ್ಡಬಹುದು. ಮೊಬೈಲ್ ಕದ್ದು ಪರಾರಿಯಾಗಲೂ ಬಹುದು. ಬಳಿಕ ನಿಮ್ಮನ್ನೇ ಬ್ಲ್ಯಾಕ್‌ಮೇಲ್ ಮಾಡಬಹುದು.
ಇಲ್ಲಿನ ಮತ್ತಿಕೆರೆಯ ದೇವವ್ರಾತ್ ಸಿಂಗ್ ಎಂಬುವವರ ಬಳಿ ಬಂದ ಪವನ್ ಎಂಬಾತ ತನ್ನ ಮೊಬೈಲ್ ಕೆಟ್ಟು ಹೋಗಿದೆ. ಕರೆಯೊಂದು ಮಾಡಬೇಕು. ಪ್ಲೀಸ್ ನಿಮ್ಮ ಮೊಬೈಲ್ ಕೊಡಿ ಎಂದು ಕೇಳಿದ್ದಾನೆ. ಯಾವುದೋ ತೊಂದರೆಯಲ್ಲಿ ಇರಬೇಕೆಂದುಕೊಂಡ ದೇವವ್ರಾತ್ ಸಿಂಗ್, ಸಹಾನುಭೂತಿ ತೋರಿ ಮೊಬೈಲ್ ಅನ್‌ಲಾಕ್ ಮಾಡಿ ಪವನ್‌ಗೆ ಕೊಟ್ಟಿದ್ದಾರೆ. ಫೋನ್ ಮಾಡುವ ನೆಪದಲ್ಲಿ ದೂರ ಬಂದ ಪವನ್ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.
ಎಸ್ಕೇಪ್ ಆದವನಿಂದ ಬ್ಲ್ಯಾಕ್‌ಮೇಲ್
ಮೊದಲೇ ಮೊಬೈಲ್ ಅನ್‌ಲಾಕ್ ಪ್ಯಾಟ್ರನ್ ಅನ್ನು ಕದ್ದು ನೋಡಿದ್ದ ಖದೀಮ, ಮೊಬೈಲ್ ಪಡೆದು ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಪರಾರಿ ಆಗಿದ್ದ. ಬಳಿಕ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೊ, ವಿಡಿಯೊ ನೋಡಿದ್ದಾನೆ. ದೇವವ್ರಾತ ಸಿಂಗ್ ಹಾಗೂ ಪ್ರೇಯಸಿಯ ಖಾಸಗಿ ಫೋಟೊಗಳನ್ನು ಗಮಮಿಸಿದವನೇ, ದೇವವ್ರಾತ್ ಸಿಂಗ್ ಗರ್ಲ್ ಫ್ರೆಂಡ್‌ಗೆ ಕರೆ ಮಾಡಿ ಖಾಸಗಿ ಫೋಟೊಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಫೋಟೊ ಲೀಕ್ ಮಾಡಬಾರದು ಎಂದರೆ 1 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇಷ್ಟು ಸಾಲದು ಎಂದು ಯುವತಿಗೆ ಅಸಭ್ಯವಾಗಿ ಮೆಸೇಜ್ ಕಳುಹಿಸಿದ್ದಾನೆ. ಜತೆಗೆ ದೇವವ್ರಾತ್ ಸಿಂಗ್ ತಾಯಿಗೂ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ದೇವವ್ರಾತ್ ಸಿಂಗ್ ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದರು.
ಖೆಡ್ಡಾ ತೋಡಿದ ಪೊಲೀಸರು
ದೂರು ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಸುರೇಶ್ ಕಾರ್ಯಾಚರಣೆಗೆ ಇಳಿದರು. ಆರೋಪಿ ಪವನ್‌ಗೆ ಹಣ ಕೊಡುವುದಾಗಿ ನಂಬಿಸಿ ಕರೆಸಿಕೊಂಡರು. ಹಣದಾಸೆಗೆ ಬಂದ ಪವನ್ ಪೊಲೀಸರು ಹಾಕಿದ ಖೆಡ್ಡಾಕ್ಕೆ ಬಿದ್ದಿದ್ದಾನೆ.
ಡ್ರಗ್ ಪೆಡ್ಲರ್ ಜತೆಗೆ ನಂಟು ಹೊಂದಿದ್ದ ಆರೋಪಿ
ವಿಚಾರಣೆ ವೇಳೆ ಆರೋಪಿ ಪವನ್ ಡ್ರಗ್ ಪೆಡ್ಲರ್ ಜತೆಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಡ್ರಗ್ ಪೆಡ್ಲರ್ ಸೈಯದ್ ನಿಯಾಜ್ ಎಂಬಾತನ ಜತೆಗೆ ಡ್ರಗ್ಸ್ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಪವನ್ ಮಾಹಿತಿ ಮೇರೆಗೆ ಸೈಯದ್ ನಿಯಾಜ್‌ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 3.45 ಲಕ್ಷ ಬೆಲೆಬಾಳುವ ಎಂಡಿಎಂಎ, 560 ಗ್ರಾಂ ಗಾಂಜಾ, ಮೊಬೈಲ್ ಫೋನ್, ಒಂದು ಕಾರ್, ಎಕ್ಸ್‌ಟೆಸಿ ಟ್ಯಾಬ್ಲೆಟ್ ಪೌಡರ್ ವಶಕ್ಕೆ ಪಡೆಯಲಾಗಿದೆ. ಯಶವಂತಪುರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ | Cylinder Blast | ಅಯ್ಯಪ್ಪ ಭಕ್ತರಿಗೆ ಉಪಾಹಾರ ಸಿದ್ಧಪಡಿಸುವ ವೇಳೆ ಸಿಲಿಂಡರ್ ಸ್ಫೋಟ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ