ಧಾರವಾಡ: ರಕ್ತದಾನ ಶ್ರೇಷ್ಠದಾನ ಎಂಬ ನಿಟ್ಟಿನಲ್ಲಿ ಸಾಕಷ್ಟು ರಕ್ತದಾನ ಶಿಬಿರಗಳು ನಡೆಯುತ್ತವೆ. ಕೆಲವರು ಸ್ವಯಂ ಪ್ರೇರಿತವಾಗಿ ರಕ್ತವನ್ನು ದಾನವಾಗಿ ನೀಡುತ್ತಾರೆ. ಆದರೆ, ಇಲ್ಲೊಂದು ಶ್ವಾನದ ರಕ್ತದಾನವು ಭಾರಿ ಸದ್ದು ಮಾಡಿದೆ. ಡಾಗ್ ಸ್ಕ್ವಾಡ್‌ನ ಶ್ವಾನವೊಂದಕ್ಕೆ ಇನ್ನೊಂದು ಶ್ವಾನವು ರಕ್ತದಾನ (Blood Donate) ಮಾಡುವ ಮೂಲಕ ಪ್ರಾಣ ಉಳಿಸಿದ ಘಟನೆಗೆ ಧಾರವಾಡದ ಕೃಷಿ ಮೇಳ ಸಾಕ್ಷಿಯಾಗಿದೆ!
ಇಲ್ಲಿನ ಕೃಷಿ ಮೇಳಕ್ಕೆ ಬಂದಿದ್ದ ಡಾಗ್ ಸ್ಕ್ವಾಡ್‌ನ ಮಾಯಾ ಎಂಬ ನಾಯಿ ಅನಾರೋಗ್ಯಕ್ಕೀಡಾಗಿತ್ತು. ಇದಕ್ಕೆ ರಕ್ತದ ಅವಶ್ಯಕತೆ ಇದೆ ಎಂದು ಪಶು ಚಿಕಿತ್ಸಾಲಯದ ಡಾ.ಅನಿಲ್ ಪಾಟೀಲ್ ತಿಳಿಸಿದರು. ಈ ವೇಳೆ ಸುದ್ದಿ ಹರಡಿದೆ. ಅಲ್ಲದೆ, ವೈದ್ಯರು ಪರಿಚಿತ ಸೋಮಶೇಖರ್ ಎಂಬುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ತಮ್ಮ ಶ್ವಾನ ಚಾರ್ಲಿಯನ್ನು ಕೃಷಿ ಮೇಳದ ಸ್ಥಳಕ್ಕೆ ಕರೆತಂದು ರಕ್ತದಾನ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಾಯಾ ಏರ್‌ಪೋರ್ಟ್ ಭದ್ರತೆಯಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಲಾಗಿದೆ. ಬಳಿಕ ಪಶುವೈದ್ಯರು ರಕ್ತದಾನವನ್ನು ಸರಾಗವಾಗಿ ನೆರವೇರಿಸಿ ಮಾಯಾಗೆ ರಕ್ತ ನೀಡಿದ್ದಾರೆ. ಇದರಿಂದಾಗಿ ಮಾಯಾ ಚೇತರಿಕೆ ಕಂಡಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರು ಖುಷಿಗೊಂಡಿದ್ದಾರೆ. ಅಂದಹಾಗೆ ಚಾರ್ಲಿ ರಕ್ತದಾನ ಮಾಡುತ್ತಿರುವುದು ಇದು ೨ನೇ ಬಾರಿ ಎಂದು ಹೇಳಲಾಗಿದೆ. ಈ ಹಿಂದೆ ಅಪಘಾತಕ್ಕೀಡಾದ ನಾಯಿಯೊಂದಕ್ಕೆ ರಕ್ತ ನೀಡಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ | Child theft rumour | ವಿಜಯನಗರ, ಧಾರವಾಡಕ್ಕೂ ಹಬ್ಬಿದ ಹಲ್ಲೆ ಹಾವಳಿ, ಇಬ್ಬರ ಮೇಲೆ ತೀವ್ರ ದಾಳಿ