ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ವಿಶೇಷ ಕೊಡುಗೆಯನ್ನು ನೀಡಿದೆ. ಅದೇನೆಂದರೆ, ಅವತ್ತು ಯಾರು ಯಾವ ಬಸ್‌ನಲ್ಲಿ ಎಷ್ಟು ಬಾರಿ ಓಡಾಡಿದರೂ ಫುಲ್ ಫ್ರೀ, ಒಂದು ಪೈಸೆಯನ್ನೂ ಕೊಡಬೇಕಾಗಿಲ್ಲ!
ಹೌದು, ಬಿಎಂಟಿಸಿ ತನ್ನ ಎಲ್ಲಾ ಬಸ್‌ಗಳಲ್ಲಿ ಇಡೀ ದಿನ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿದೆ. ಆಗಸ್ಟ್ ೧೫ರಂದು ಇಡೀದಿನ ಬೆಂಗಳೂರಿನಲ್ಲಿ ಯಾರು ಎಲ್ಲಿಗೆ ಬೇಕಾದರೂ ಸಂಚರಿಸಬಹುದು, ಹಣ ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ ಎಂದು ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದ್ದಾರೆ. ವಿಶೇಷವೆಂದರೆ ಇದೇ ಸಂದರ್ಭದಲ್ಲಿ ಬಿಎಂಟಿಸಿ ತನ್ನ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದೆ. ಎರಡೂ ಖುಷಿಗಾಗಿ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶವನ್ನು ಒದಗಿಸಿದೆ.
ಬಿಎಂಟಿಸಿಗೆ ಸೇರಿದ ಎಲ್ಲ ಸಾಮಾನ್ಯ ಬಸ್‌ಗಳು ಮಾತ್ರವಲ್ಲದೆ, ವೋಲ್ವೊ ಬಸ್‌ಗಳಲ್ಲಿ ಕೂಡಾ ಉಚಿತ ಪ್ರಯಾಣದ ಅವಕಾಶವಿದೆ. 24 ಗಂಟೆಗಳ ಕಾಲ ಸಂಪೂರ್ಣ ಉಚಿತವಾದ ಸಂಚಾರಕ್ಕೆ ಅವಕಾಶ ದೊರೆಯಲಿದೆ. ಅಂದರೆ, ಆಗಸ್ಟ್ ೧೪ರ ರಾತ್ರಿ ೧೨ ಗಂಟೆಯಿಂದ ಆರಂಭಗೊಳ್ಳುವ ಉಚಿತ ಪ್ರಯಾಣದ ಅವಕಾಶ ಮರುದಿನ ರಾತ್ರಿ ೧೨ ಗಂಟೆಯವರೆಗೂ ಇರುತ್ತದೆ. ಇದರಿಂದ ಬಿಎಂಟಿಸಿಗೆ ಒಟ್ಟು ೩ ಕೋಟಿ ರೂ. ಹೊರೆ ಬೀಳಲಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದ್ದಾರೆ.
ಬರಲಿದೆ ೩೦೦ ಎಲೆಕ್ಟ್ರಿಕ್ ಬಸ್
ಈ ನಡುವೆ ಅಮೃತ ಮಹೋತ್ಸವ ಮತ್ತು ಬಿಎಂಟಿಸಿಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಆಗಸ್ಟ್ 1೫ರಂದು ೩೦೦ ಎಲೆಕ್ಟ್ರಿಕ್ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಚಾಲನೆಯಲ್ಲಿರುವ ೯೦ ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚುವರಿಯಾಗಿ ಈ ಬಸ್ ಗಳು ಕಾರ್ಯಾಚರಿಸಲಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ನಂದೀಶ್ ರೆಡ್ಡಿ ಅವರು ಹೇಳಿದ್ದಾರೆ.
ಫ್ಲವರ್ ಶೋಗೆ ಬರುವವರಿಗೆ ಮೆಟ್ರೊ ವಿನಾಯಿತಿ
ಲಾಲ್ ಭಾಗ್‌ನಲ್ಲಿ ನಡೆಯತ್ತಿರುವ ಫಲಪುಷ್ಟ ಪ್ರದರ್ಶನದ ಪ್ರಯುಕ್ತ ನಮ್ಮ ಮೆಟ್ರೋ ವಿನಾಯಿತಿ ಪ್ರಕಟಿಸಿದೆ. ಆಗಸ್ಟ್ ೧೩ರಿಂದ ೧೫ರವರೆಗೆ ಲಾಲ್ ಬಾಗ್‌ನಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ೩೦ ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಈ ದಿನಗಳಲ್ಲಿ ಪೇಪರ್ ಟಿಕೆಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ | ಪೆಟ್ರೋಲ್ ಬಂಕ್‌ಗಳ ಮುಂದೆ ಬಿಎಂಟಿಸಿ ಬಸ್‌ಗಳ ಸರತಿ: ನಷ್ಟ ತಪ್ಪಿಸಲು ಉಪಾಯ