ವಿಜಯಪುರ: ಮತ್ತೆ ರಾಜ್ಯದಲ್ಲಿ ಬಾಯ್ಲರ್ ಸ್ಫೋಟದ ಸದ್ದು ಕೇಳಿಸಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಭಾನುವಾರ ಮುಂಜಾನೆ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ (Boiler Blast).
ನಸುಕಿನ ಜಾವ ಚಹಾ ಕುಡಿಯಲು 15 ಕಾರ್ಮಿಕರು ತೆರಳಿದ್ದ ವೇಳೆ ಬಾಯ್ಲರ್ ಸ್ಫೋಟಗೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಿಂದೆಯೂ ನಡೆದಿತ್ತು
ಮುಂದಿನ ಸೀಸನ್‌ಗೆ ಕಬ್ಬು ನುರಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಕಾರ್ಖಾನೆಯ ಬಾಯ್ಲರ್ ಬ್ಲಾಸ್ಟ್ ಆಗಿದೆ. ಈ ಹಿಂದೆಯೂ ಇಲ್ಲಿ ಇದೇ ರೀತಿಯ ಅನಾಹುತ ಸಂಭವಿಸಿತ್ತು. 2023ರ ಮಾರ್ಚ್ 4ರಂದು ಬಾಯ್ಲರ್ ಸ್ಫೋಟಗೊಂಡು
ಓರ್ವ ಕಾರ್ಮಿಕ ಮೃತಪಟ್ಟು ಇತರ ನಾಲ್ಕು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು. ಅದಾಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಮತ್ತೆ ಬಾಯ್ಲರ್ ಸ್ಫೋಟಗೊಂಡಿದೆ.
ಇಂದು ಮತ್ತೆ ಬಾಯ್ಲರ್ ಸ್ಫೋಟಗೊಂಡಿರುವ ಘಟನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಬಾಯ್ಲರ್ ಅಳವಡಿಸಿರುವುದೇ ಅವಘಡಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಕಳಪೆ ಗುಣಮಟ್ಟದ ಬಾಯ್ಲರ್ ನಿರ್ಮಾಣ ಮಾಡಿದ್ದಾರೆ ಎನ್ನುವ ದೂರು ಕೂಡ ಕೇಳಿ ಬಂದಿದೆ. 50 ಕೋಟಿ ರೂ. ವೆಚ್ಚದಲ್ಲಿ ಬಾಯ್ಲರ್ ನಿರ್ಮಾಣ ಮಾಡಲಾಗಿತ್ತು. ಶಶಿಕಾಂತಗೌಡ ಪಾಟೀಲ್ ಅವರು ನಿರ್ಮಾಣದ ಅನುಭವ ಇಲ್ಲದ ಪೂನಾ ಮೂಲದ ಎಸ್.ಎಸ್. ಎಂಜಿನಿಯರಿಂಗ್‌ಗೆ ಬಾಯ್ಲರ್ ನಿರ್ಮಾಣ ಕಾಮಗಾರಿ ನೀಡಿದ್ದರು ಎನ್ನಲಾಗಿದೆ.
ತನಿಖೆಗೆ ಆಗ್ರಹ
ಶಶಿಕಾಂತಗೌಡ ಪಾಟೀಲ್ ಅಧ್ಯಕ್ಷತೆ ಅವಧಿಯ ಕಾಮಗಾರಿಗಳು ಹಾಗೂ ಬಾಯ್ಲರ್ ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹ ಕೇಳಿ ಬಂದಿದೆ. ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಿಬೇಕು ಎನ್ನುವ ಕೂಗು ಜೋರಾಗಿದೆ.
ಅಥಣಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
ಕೆಲವು ದಿನಗಳ ಹಿಂದೆ ಚಿಕ್ಕೋಡಿಯಲ್ಲಿ ಬಾಯ್ಲರ್ ಸ್ಫೋಟವಾಗಿ ಮಹಿಳೆ ಮೃತಪಟ್ಟಿದ್ದ ಘಟನೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಿಯಾ ಎಕ್ಸ್‌ಪೋರ್ಟ್ಸ್ ಕೈಗಾರಿಕಾ ಘಟಕದ ಬಾಯ್ಲರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿತ್ತು. ಅಥಣಿ ತಾಲೂಕಿನ ಸತ್ತಿ ಗ್ರಾಮದ ನಿವಾಸಿ ಸುನಂದಾ ಸಿದಪ್ಪ ತೇಲಿ (36) ಮೃತಪಟ್ಟಿದ್ದರು. ಗಾಯಗೊಂಡವರನ್ನು ಅಥಣಿ ಪಟ್ಟಣದ ಹಾಗೂ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಗೋಡೆ ನುಜ್ಜುಗೊಜ್ಜಾಗಿದ್ದು, ಕೆಲ ಕಾಲ ಕೈಗಾರಿಕಾ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: Boiler blast : ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಐವರು ಕಾರ್ಮಿಕರಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ