ಕಾರವಾರ: ಇಲ್ಲಿನ ಭಟ್ಕಳ ಪಟ್ಟಣದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಂಬ್ ಬ್ಲ್ಯಾಸ್ಟ್ (Bomb Threat) ಮಾಡುವುದಾಗಿ ಬೆದರಿಕೆ ಹಾಕಿ ಪತ್ರ ರವಾನೆ ಮಾಡಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆದರಿಕೆ ಕಾರ್ಡ್ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂದು ಗುರುತಿಸಲಾಗಿದ್ದು, ಆತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
“ಚೆನ್ನೈ ಕಲೆದಾ- ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹ್ಯಾಪಿ ನ್ಯೂ ಇಯರ್ 2023” ಎಂದು ಇಂಗ್ಲೀಷ್‌ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್‌ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ಪೊಲಿಸರು ವಿಚಾರವನ್ನು ಬಹಿರಂಗಪಡಿಸದೇ ತನಿಖೆ ನಡೆಸಿದ್ದರು. ಪೋಸ್ಟ್ ಕಾರ್ಡ್ ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಆಗಿದೆ ಎನ್ನಲಾಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೇ ರೀತಿ ಪೋಸ್ಟ್ ಕಾರ್ಡ್ ಬೆದರಿಕೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಹೊಸಪೇಟೆ ಮೂಲದ ಹನುಮಂತಪ್ಪನನ್ನು ಬಂಧಿಸಿದ್ದಾರೆ.
ತನಿಖೆ ನಡೆಸಿದಾಗ ಕಳ್ಳತನದ ವಿಷಯ ಮುಚ್ಚಿಡಲು ಕಳ್ಳ ಬರೆದಿದ್ದ ಹುಸಿ ಬೆದರಿಕೆ ಪತ್ರ ಎಂದು ತಿಳಿದು ಬಂದಿದೆ. ಆರೋಪಿ ಹನುಮಂತಪ್ಪ ಚೆನ್ನೈನಲ್ಲಿ ಆ್ಯಪಲ್ ಲ್ಯಾಪ್ ಟಾಪ್‌ವೊಂದನ್ನು ಕಳ್ಳತನ ಮಾಡಿ ಅಂಗಡಿಯೊಂದಕ್ಕೆ ಅದನ್ನು ಮಾರಲು ಹೋಗಿದ್ದ. ಅಂಗಡಿ ಮಾಲೀಕ ಅನುಮಾನ ಬಂದು ಲಾಗಿನ್ ಮಾಡಲು ಆ್ಯಪಲ್ ಐಡಿ ಕೊಡು ಎಂದು ಕೇಳಿದ್ದಾನೆ. ಈ ವೇಳೆ ಕಕ್ಕಾಬಿಕ್ಕಿಯಾದ ಹನುಮಂತಪ್ಪ ಅಲ್ಲಿಂದ ತಪ್ಪಿಸಿಕೊಂಡಿದ್ದು, ಅಂಗಡಿ ಮಾಲೀಕನ ಮೇಲಿನ ಸಿಟ್ಟಿಗೆ ಆತನ ಮೊಬೈಲ್ ನಂಬರ್ ಹಾಕಿ ಹುಸಿ ಬಾಂಬ್ ಬೆದರಿಕೆ ಪತ್ರ ಹಾಕಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಅದೇ ಕಳ್ಳನೇ ಭಟ್ಕಳಕ್ಕೂ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಮಾಹಿತಿ ಇದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ನ್ಯಾಯಾಲಯದಿಂದ ಬಾಡಿ ವಾರೆಂಟ್ ಮೇಲೆ ಆತನನ್ನು ಪಡೆಯುವ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆತನ ವಿಚಾರಣೆಯ ನಂತರ ಆತನಿಗೂ ಭಟ್ಕಳಕ್ಕೂ ಏನು ಸಂಬಂಧ, ಯಾವ ಕಾರಣಕ್ಕೆ ಭಟ್ಕಳಕ್ಕೆ ಪತ್ರ ಕಳುಸಿದ್ದ ಎನ್ನುವ ಅಂಶಗಳು ಬೆಳಕಿಗೆ ಬರಲಿವೆ ಎಂದು ಭಟ್ಕಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Viral Video | ಹುಡುಗಿಯರ ಮಸ್ತ್ ಡ್ಯಾನ್ಸ್, ಬೆಸ್ಟ್‌ನಲ್ಲಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು