ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿ ಇರುವ ಎಬನೈಜರ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಶಾಲೆಯೊಳಗೆ ಶಕ್ತಿಯುತ ಬಾಂಬ್ ಇರಿಸಲಾಗಿದೆ ಎಂದು ಬಾಂಬ್ ಬೆದರಿಕೆ (Bomb threat) ಬಂದಿದ್ದು, ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ.
ಶಾಲೆಯ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿದ್ದು, ಶಾಲಾಡಳಿತ ಮಂಡಳಿ ಎಚ್ಚೆತ್ತುಕೊಂಡು ಕೂಡಲೇ ದಾಖಲಾತಿ ಪ್ರಕ್ರಿಯೆಯನ್ನು ನಿಲ್ಲಿಸಿ, ಶಾಲೆಯನ್ನು ಬಂದ್ ಮಾಡಿದ್ದಾರೆ. ಇದೇ ಶಾಲೆಗೆ ಹಿಂದೊಮ್ಮೆ ಏಪ್ರಿಲ್ 8 ರಂದು ಬಾಂಬ್ ಬೆದರಿಕೆಯ ಇಮೇಲ್‌ವೊಂದು ಬಂದಿತ್ತು. ಇದೀಗ ಮತ್ತೊಮ್ಮೆ ಇದೆ ಶಾಲೆಗೆ ಬಾಂಬ್ ಇರಿಸಲಾಗಿದೆ ಎಂಬ ಇಮೇಲ್ ಸಂದೇಶ ಬಂದಿದೆ.
ಈಗಾಗಲೇ ಶಾಲೆಗಳಿಗೆ ಪೊಲೀಸರು ಹಾಗೂ, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಯಲ್ಲಿದ್ದ ಮಕ್ಕಳು, ಪೋಷಕರು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಇದನ್ನೂ ಓದಿ: Karnataka Election 2023: ಗದಗ ಮಸ್ಟರಿಂಗ್ ಸೆಂಟರ್‌ವೊಳಗೆ ಹಾವು ಪ್ರತ್ಯಕ್ಷ; ಯಲಹಂಕದಲ್ಲಿ ತಲೆ ತಿರುಗಿ ಬಿದ್ದ ಸಿಬ್ಬಂದಿ
ಬೆದರಿಕೆ ಇಮೇಲ್ ಅನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಪುರುಷೋತ್ತಮ್ ಭೇಟಿ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಲೋಪ ಆಗದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಶಾಲಾ ಸಿಬ್ಬಂದಿಗೆ ಬಂದಿರುವ ಇಮೇಲ್ ಐಡಿಯನ್ನು ಚೆಕ್ ಮಾಡಲಾಗಿದೆ. ಇತ್ತ ಬನ್ನೇರುಘಟ್ಟದ ಇಂಡಿಯನ್ ಶಾಲೆಗೂ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್ ಬಂದಿದೆ ಎನ್ನಲಾಗಿದೆ.
ಎಬೆನೇಜರ್ ಶಾಲೆಗೆ ಬಂದಿರುವ ಇಮೇಲ್‌ನಲ್ಲಿ ಏನಿದೆ?
Dzanum@tildamail.com ಎಂಬ ಇಮೇಲ್ ಐಡಿಯಿಂದ ಸಂದೇಶ ಬಂದಿದ್ದು, ಈ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ. ಪ್ರಪಂಚದಾದ್ಯಂತ ಶಾಲೆಗಳ ಮೇಲೆ ಅನೇಕ ದಾಳಿಗಳು ನಡೆಯುತ್ತಿವೆ. ಮನುಷ್ಯನ ಅಸ್ತಿತ್ವವೇ ದುಷ್ಟ ಪರಿಣಾಮವೇ ಪರಿಪೂರ್ಣ ಗುಲಾಮಗಿರಿಗೆ ತರಬೇತಿ ನೀಡುವುದು ಶಾಲೆ. ಮಕ್ಕಳನ್ನು ನಿಮ್ಮಂತೆಯೇ ನಿಷ್ಪ್ರಯೋಜಕರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೀರಿ. 13 ವರ್ಷದಿಂದ ಸಹಿಸಿಕೊಂಡ ದ್ವೇಷವನ್ನು ಇನ್ನು ತಡೆಯಲು ಸಾಧ್ಯವಿಲ್ಲ. ನೀವು ಸಾಯುವ ಮೊದಲು ಅನುಭವಿಸುವ ಚಿತ್ರಹಿಂಸೆಗಳು ನಿಮ್ಮ ದೇಹವನ್ನು ಚುಚ್ಚಬೇಕು. ಸೀಸದ ಬುಲೆಟ್‌ಗಳು, ಗುಂಡೇಟಿನ ಧ್ವನಿನಿಂದ ನಿಮ್ಮ ನೋವಿನ ಅಂತ್ಯವಾಗಬೇಕೆಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.