ರಾಜ್ಯ ರಾಜಕಾರಣದಲ್ಲಾದ ದಿಢೀರ್ ಬೆಳವಣಿಗೆಗಳ ನಡುವೆ, ಜ್ವಲಂತ ಸಮಸ್ಯೆಗಳ ಗೂಡಾಗಿದ್ದ ರಾಜ್ಯದ ಜವಾಬ್ದಾರಿಯನ್ನು ಹೆಗಲಿನ ಮೇಲೆ ಹೊತ್ತವರು ಬಸವರಾಜ ಬೊಮ್ಮಾಯಿ. 2021ರ ಜುಲೈ 27ರಂದು ರಾಜ್ಯದ 23ನೇ ಸಿಎಂ ಆಗಿ ನೇಮಕಗೊಂಡಾಗ ಅವರ ಮುಂದಿದ್ದದ್ದು ಬರೀ ಸವಾಲುಗಳೇ. ಒಂದೆಡೆ ಕೊರೊನಾ ಬಿಕ್ಕಟ್ಟು, ಮತ್ತೊಂದೆಡೆ ನೆರೆ ಪರಿಸ್ಥಿತಿ. ಈ ವೇಳೆ ಸಿಎಂ ಬಗ್ಗೆ ಜನರಿಗಿದ್ದ ನಿರೀಕ್ಷೆಯೂ ಹೆಚ್ಚು, ಅನುಮಾನವೂ ಹೆಚ್ಚು… ಆದರೆ, ಎಲ್ಲರ ಸಂಶಯಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರಕೊಟ್ಟರು ಬೊಮ್ಮಾಯಿ. ಅವರಿಗೆ ಪದವಿ ಅನಿರೀಕ್ಷಿತವಾದರೂ, ರಾಜ್ಯದ ಪರಿಸ್ಥಿತಿಯ ಬಗ್ಗೆ ದೀರ್ಘ ಮುನ್ನೋಟವಿತ್ತು ಎಂಬುದಕ್ಕೆ ಈ ವರ್ಷ ಪೂರೈಸಿದ ಸಾಧನೆಯೇ ಸಾಕ್ಷಿ.
ಮನೆಯಲ್ಲೇ ಶುರುವಾಗಿತ್ತು ರಾಜಕೀಯ ಪಾಠ
ಹುಬ್ಬಳ್ಳಿ ಮೂಲದವರಾದ ಬೊಮ್ಮಾಯಿ, ರಾಜಕಾರಣಿಗಳೆಂದರೆ ಮಾಸ್ ಲೀಡರ್, ಡೈನಾಮಿಕ್ ಎನ್ನುವ ಕಲ್ಪನೆಗಳಿಗಿಂತ ತೀರ ಭಿನ್ನ. ಮೃದುಭಾಷಿ, ಸಜ್ಜನ ರಾಜಕಾರಣಿಯಾಗಿರುವ ಇವರು, ನಡುವಳಿಕೆಯಲ್ಲೂ, ಅಭಿವೃದ್ಧಿಯಲ್ಲೂ ಕ್ಲಾಸ್..
ಬೊಮ್ಮಾಯಿ ಅವರ ಹೆಸರು ರಾಜಕಾರಣದಲ್ಲಿ ಹೊಸದೇನಲ್ಲ, ಹಾಗೆ ರಾಜಕೀಯ ಕಲಿಯೋಕೆ ಹೊಸಲು ದಾಟಿ ಬರೋ ಅಗತ್ಯವೂ ಅವರಿಗಿರಲಿಲ್ಲ.. ಕಾರಣ, ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ .ಆರ್. ಬೊಮ್ಮಾಯಿ ಸ್ವತಃ ನಾಡು ಕಂಡ ಹಿರಿಯ ಮುತ್ಸದ್ಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಮನೆಯ ಅಂಗಳದಿಂದಲೇ ರಾಜಕೀಯದ ಆಳ, ಅಗಲವನ್ನರಿತ ಬೊಮ್ಮಾಯಿ ಅವರು ವಿಧಾನಸಭೆಯ ಪಡಸಾಲೆಗೆ ಬರುವಷ್ಟರಲ್ಲಿ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡವರು.
ಜೆ ಎಚ್ ಪಟೇಲ್ ಅವರು ಸಿಎಂ ಆಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗುವ ಮೂಲಕ ಅಧಿಕೃತ ಜವಾಬ್ದಾರಿಯನ್ನು ವಹಿಸಿಕೊಂಡರು. ಆ ನಂತರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಮುಂದೆ ಸರ್ಕಾರ ರಚನೆಯಾದಾಗ ಜಲಸಂಪನ್ಮೂಲದಂತಹ ಪ್ರಬಲ ಖಾತೆಯನ್ನು ನಿಭಾಯಿಸಿದರು. ಸಹಕಾರ, ಸಂಸದೀಯ ವ್ಯವಹಾರ ಹಾಗೂ ಗೃಹ ಇಲಾಖೆಗಳನ್ನು ನಿಭಾಯಿಸಿದ ಬಸವರಾಜ ಬೊಮ್ಮಾಯಿಯವರು ರಾಜಕಾರಣದ ಒಳಗುಟ್ಟುಗಳನ್ನು ಪಟ್ಟಾಗಿ ಕಲಿತವರು. ತಮ್ಮ ತಂದೆಯವರಿಂದ ಕಲಿತ ರಾಜಕೀಯ ಪಾಠ, ಅನುಭವಗಳನ್ನೆಲ್ಲ ಒಟ್ಟುಗೂಡಿಸಿದ್ದ ಕಾರಣವೋ, ಏನೋ ಸಮಸ್ಯೆಗಳ ಮೇಲೆ ನಡೆಯುತ್ತಿದ್ದ ಸರ್ಕಾರ ಮುಗ್ಗರಿಸಬಹುದೆಂಬ ಮಾತುಗಳನ್ನೆಲ್ಲ ಬೊಮ್ಮಾಯಿ ತಮ್ಮ ಕಾರ್ಯಶೈಲಿಯ ಮೂಲಕವೇ ಸುಳ್ಳಾಗಿಸಿದ್ದಾರೆ.
ಕೊರೋನಾದಿಂದ ಜನರ ಜೀವ ರಕ್ಷಣೆ
ರಾಜ್ಯದಲ್ಲಿ ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಲಾಕ್ಡೌನ್ ನಂತಹ ಹಲವು ನೀತಿಗಳಿಂದ ಬೇಸತ್ತಿದ್ದ ಜನರು ಸರ್ಕಾರದ ವಿರುದ್ಧವೂ ಬೇಸರಗೊಂಡಿದ್ದರು.. ಜನರ ಈ ಮನಸ್ಥಿತಿಯ ನಡುವೆಯೇ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಿರುವುದು ಬೊಮ್ಮಾಯಿ ಸರ್ಕಾರಕ್ಕಿದ್ದ ದೊಡ್ಡ ಸವಾಲು. ಜನರ ನಾಡಿಮಿಡಿತದ ಅರಿವಿದ್ದ ಬೊಮ್ಮಾಯಿ ಸರ್ಕಾರ, ಜನರ ಆಕ್ರೋಶ, ಬೇಸರಗಳನ್ನು ಬದಿಗಿರಿಸಿ, ಸಾಂತ್ವನ ನೀಡಿತು. ಲಸಿಕೆ ವಿತರಣೆ ಕ್ಷಿಪ್ರಗೊಳಿಸುವ ನೀತಿ ಸೇರಿದಂತೆ ಹಲವು ಕ್ರಮಗಳ ಮೂಲಕ 3ನೇ ಅವಧಿಯಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಿ, ಸವಾಲನ್ನು ಹಿಮ್ಮೆಟ್ಟಿಸಿದ್ದು ಬೊಮ್ಮಾಯಿ ಸರ್ಕಾರಕ್ಕೆ ಸಿಕ್ಕ ಮೊದಲ ಜಯ..
ರೈತರ ಮಕ್ಕಳಿಗೆ ಶಿಕ್ಷಣ ನೆರವು
ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಮಸ್ಯೆಗಳತ್ತ ಗಮನಹರಿಸಿದ ಸರ್ಕಾರ, ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಸಿಎಂ ಆದ ಮೊದಲ ದಿನವೇ ರೈತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುವ ರೈತ ವಿದ್ಯಾ ನಿಧಿ ಯೋಜನೆ ಘೋಷಿಸಿದರು ಬೊಮ್ಮಾಯಿ. ಪ್ರೌಢಶಾಲೆಯಿಂದ, ಸ್ನಾತಕೋತ್ತರ ವಿದ್ಯಾಭ್ಯಾಸದವರೆಗೆ ರೈತರ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಈ ಯೋಜನೆ ಸಂಜೀವಿನಿಯಾಯಿತು. ಈ ಮೂಲಕ, ಕಳೆದ ವರ್ಷ 7.13 ಲಕ್ಷ ವಿದ್ಯಾರ್ಥಿಗಳಿಗೆ 261 ಕೋಟಿ ರೂ. ನೆರವು ನೀಡಲಾಯಿತು.
ನೆರೆ ಸಂತ್ರಸ್ತರಿಗೂ ಕ್ಷಿಪ್ರ ಪರಿಹಾರ
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಪವಾದವನ್ನು ಬೊಮ್ಮಾಯಿ ಸರ್ಕಾರ ಅಳಿಸಿಹಾಕಿದ್ದು, ಸಮಾಜದ ಎಲ್ಲ ಸ್ತರದ ಎಲ್ಲ, ವರ್ಗದ ಜನರಿಗೂ ಸೇವೆಯನ್ನು ತಲುಪುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ನೆರೆಯಿಂದಾಗಿ ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಕ್ಷಿಪ್ರಗತಿಯಲ್ಲಿ ಪರಿಹಾರ ಒದಗಿಸುವ ಮೂಲಕ ತನ್ನ ಬದ್ಧತೆಯನ್ನು ಸರ್ಕಾರ ಪುನರುಚ್ಛರಿಸಿತ್ತು. ಅದರಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಿಂದ 48 ಲಕ್ಷ ರೈತರಿಗೆ ನೆರವು ಲಭಿಸಿದೆ. ಬೆಳೆ ವಿಮೆಯಲ್ಲಿ 5.29 ಲಕ್ಷ ರೈತರು 695 ಕೋಟಿ ರೂ. ನೆರವು ಪಡೆದುಕೊಂಡಿದ್ದಾರೆ. ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡವರು ಕೂಡ 1 ಕೋಟಿ ರೂ. ಪರಿಹಾರ ಪಡೆದುಕೊಂಡಿದ್ದಾರೆ.
ಸರ್ವರಂಗದಲ್ಲೂ ಯಶಸ್ಸಿನ ಹೆಜ್ಜೆ
ಕೊರೊನಾ ಬಿಕ್ಕಟ್ಟಿನಿಂದ ನೆಲಕಚ್ಚಿದ್ದ ಆರ್ಥಿಕತೆಯನ್ನು ಸರಿದೂಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಸರ್ಕಾರ ಮಾಡುತ್ತಿದ್ದು, ಬಹುತೇಕ ಯಶಸ್ವಿಯೂ ಆಗಿದೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳ ಕೊಡುಗೆ ಹಿಮ್ಮುಖವಾದ ಸಂದರ್ಭದಲ್ಲೂ ಧೃತಿಗೆಡದೆ, ಸರ್ಕಾರ ತನ್ನ ಪ್ರಯತ್ನಗಳನ್ನುಮುಂದುವರಿಸಿದೆ. ಐಟಿ ಕ್ಷೇತ್ರಗಳಿಗೆ ನೀಡಿದ ಉತ್ತೇಜನ, ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳುವಂತಹ ಕ್ರಮಗಳಿಂದಾಗಿ ಎದುರಾಗಿದ್ದ ಆರ್ಥಿಕ ಬಿಕ್ಕಟ್ಟನ್ನು ಬಹುಮಟ್ಟಿಗೆ ಪರಿಹರಿಸಲಾಗಿದೆ. ಇದಲ್ಲದೇ, ವಿಧವಾ ವೇತನ, ಪಿಂಚಣಿ ನಿಯಮಗಳ ಪರಿಷ್ಕರಣೆ ಜತೆಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯ ಧನ ನೀಡುವಂತಹ ಬೊಮ್ಮಾಯಿ ಸರ್ಕಾರದ ನಿರ್ಣಯಗಳು ಗ್ರಾಮೀಣ ಮಹಿಳೆಯರನ್ನೂ ಸ್ವಾವಲಂಬನೆಯತ್ತ ಮುನ್ನಡೆಸಿದೆ.
ಯುವ ಸಮೂಹದ ಆತ್ಮನಿರ್ಭರತೆಗೆ ಪ್ರೋತ್ಸಾಹ
ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಯುವಜನತೆ ಅಲೆದಾಡುವ ಬದಲು, ಅವರೇ ಉದ್ಯೋಗ ನೀಡುವಂತಾಗಬೇಕು ಎಂಬುದು ಬೊಮ್ಮಾಯಿ ಅವರ ಆಶಯ. ಈ ನಿಟ್ಟಿನಲ್ಲಿ ಉದ್ಯಮಿಯಾಗು, ಉದ್ಯೋಗ ನೀಡು ಎಂಬ ಯೋಜನೆಯನ್ನು ರೂಪಿಸಿದ್ದರು. ಯೋಜನೆ ಅನ್ವಯ ಬೆಂಗಳೂರು, ಕಲಬುರಗಿ,ಮೈಸೂರು, ಬೆಳಗಾವಿಯಲ್ಲಿ ವಿವಿಧೆಡೆ ಕೈಗಾರಿಕಾ ಕಾರ್ಯಗಾರಗಳನ್ನು ನಡೆಸಿ, ಸಾವಿರಾರು ಸಂಖ್ಯೆಯಲ್ಲಿ ಯುವಜನರಿಗೆ ತರಬೇತಿ ನೀಡಲಾಗಿದೆ. ಉದ್ಯೋಗ ಆರಂಭಿಸುವ ಮಂದಿಗೆ ಅಗತ್ಯ ನೆರವು ನೀಡುವುದಾಗಿಯೂ ಬೊಮ್ಮಾಯಿ ಘೋಷಿಸಿದ್ದರು. ಅಲ್ಲದೇ, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆಂದು ಕೇಂದ್ರಸರ್ಕಾರ ರೂಪಿಸಿದ ಇ-ಶ್ರಮ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈ ಮೂಲಕ ದುಡಿವ ಕೈಗಳಿಗೆ ಸುರಕ್ಷತೆಯನ್ನೂ ಒದಗಿಸಿ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸೆಮಿಕಂಡಕ್ಟರ್ ಒಪ್ಪಂದದಿಂದ 11,500 ಉದ್ಯೋಗ ಸೃಷ್ಟಿ
ಕರ್ನಾಟಕದಲ್ಲಿ ವಿದೇಶಿ ಹೂಡಿಕೆಗಳನ್ನು ಉತ್ತೇಜಿಸುವುದಕ್ಕೆ ಪೂರಕವಾದ ಕ್ರಮಗಳನ್ನೂ, ಬೊಮ್ಮಾಯಿ ಅವರು ತೆಗೆದುಕೊಂಡಿದ್ದು, ಇತ್ತೀಚೆಗಷ್ಟೇ ದಾವೋಸ್‌ನಲ್ಲಿ ನಡೆದ ಆರ್ಥಿಕ ಶೃಂಗಸಭೆಯಲ್ಲೂ ತಮ್ಮ ನೈಪುಣ್ಯತೆ ತೋರಿದ್ದರು ಎರಡು ಪ್ರಭಾವಿ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುವ ಮೂಲಕ ಕರ್ನಾಟಕದಲ್ಲಿ 52 ಸಾವಿರ ರೂ.ಗಳ ಹೂಡಿಕೆಯನ್ನು ಖಚಿತಪಡಿಸಿಕೊಂಡಿದ್ದರು. ಇದಲ್ಲದೇ, 22,900 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕೆ ಉದ್ದಿಮೆ ಸ್ಥಾಪಿಸಲು ಕೂಡ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಿಂದ 11, 500 ಉದ್ಯೋಗ ಸೃಷ್ಟಿಯಾಗಲಿದೆ.
438 ನಮ್ಮ ಕ್ಲಿನಿಕ್‌ಗಳ ಸ್ಥಾಪನೆ
ಸಾರ್ವಜನಿಕ ಹಿತಾಸಕ್ತಿಯೇ ಬೊಮ್ಮಾಯಿ ಅವರ ಪ್ರಥಮ ಆದ್ಯತೆಯಾಗಿದ್ದು, ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಸಹಾಯಧನವನ್ನೂ ಘೋಷಿಸಿದ್ದರು. ಅಲ್ಲದೇ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯದ ಜತೆಗೆ ರಾಜ್ಯದಿಂದಲೂ ಉತ್ತಮ ಸೌಲಭ್ಯ ನೀಡುವುದನ್ನು ಖಚಿತ ಪಡಿಸಿಕೊಂಡಿದ್ದರು. ಇದಲ್ಲದೇ, ಕೊರೋನಾ ಸಂಕಷ್ಟದ ನಡುವೆಯೂ ಸಮಾಜಮುಖಿ ಯೋಜನೆಯ ಭಾಗವಾಗಿ, ಯಶಸ್ವಿನಿ ಯೋಜನೆಯನ್ನು ಘೋಷಿಸಲಾಗಿತ್ತು. ಇದರ ಅನ್ವಯ ಫಲಾನುಭವಿಗಳು ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ 823 ಶಸ್ತ್ರ ಚಿಕಿತ್ಸೆಗೆ ನಗದು ರಹಿತ ಸೌಲಭ್ಯಪಡೆಬಹುದಾಗಿದೆ. (ಗ್ರಾಫಿಕ್ಸ್: ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ 823 ಶಸ್ತ್ರ ಚಿಕಿತ್ಸೆಗೆ ನಗದು ರಹಿತ ಸೌಲಭ್ಯ) ಇದರೊಂದಿಗೆ ರೋಗ ತಪಾಸಣೆ, ಸಣ್ಣ ಪ್ರಮಾಣದ ಚಿಕಿತ್ಸೆಗೆ ಜನರು ಪರದಾಡುವುದನ್ನು ತಪ್ಪಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 438 ನಮ್ಮ ಕ್ಲಿನಿಕ್ ಯೋಜನೆಯನ್ನು ಘೋಷಿಸಿದ್ದಾರೆ.
750 ಗ್ರಾಮಗಳಿಗೆ ಅಮೃತ ಹರ್ಷ
ಇನ್ನು ಗ್ರಾಮಗಳ ಅಭಿವೃದ್ಧಿಗೂ ಬೊಮ್ಮಾಯಿ ಅವರು ಆದ್ಯತೆ ನೀಡಿದ್ದು, ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮ ಪಂಚಾಯ್ತಿ ಯೋಜನೆಯನ್ನೂ ಘೋಷಿಸಿದ್ದರು. ಇದರ ಅನ್ವಯ 750 ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾಗಿರುವ ಗ್ರಾಮಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಗ್ರಾಮಗಳಿಗೆ ಪ್ರೋತ್ಸಾಹ ಧನವಾಗಿ 25 ಲಕ್ಷ ರೂ.ಗಳನ್ನು ನೀಡುವುದಾಗಿಯೂ ಘೋಷಿಸಲಾಗಿದೆ. ಗ್ರಾಮೀಣ ಆರ್ಥಿಕ ಚಟುವಟಿಕೆ ಉತ್ತೇಜಿಸುವ ಸಲುವಾಗಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಅನ್ನೂ ಉದ್ಘಾಟಿಸಲಾಗಿದ್ದು, ಬ್ಯಾಂಕಿಗೆ ರಾಜ್ಯ ಸರ್ಕಾರದಿಂದಲೇ 100 ಕೋಟಿ ರೂ. ಮೂಲ ಬಂಡವಾಳ ನೀಡುವುದಾಗಿಯೂ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ, ವಿವಿಧ ಇಲಾಖೆಗಳ ಸೇವೆಯನ್ನು ಒಂದೆಡೆ ಒದಗಿಸುವ ಉದ್ದೇಶದಿಂದ ಗ್ರಾಮ ಒನ್ ಯೋಜನೆ ಜಾರಿಗೊಳಿಸಿದೆ. ಇದು ಬೆಂಗಳೂರ್ ಒನ್ ನಂತೆಯೇ ಕಾರ್ಯನಿರ್ವಹಿಸಲಿದೆ.
ಹೀಗೆ ರಾಜ್ಯದ ಸರ್ವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾ ಹೊಸ ಹಾದಿಯಲ್ಲಿ ರಾಜ್ಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟಿಬದ್ಧರಾಗಿ ಮುಂದುವರಿಯುತ್ತಿರುವುದು ಸತ್ಯ.
ಇದನ್ನೂ ಓದಿ| ಬೊಮ್ಮಾಯಿ ಆಡಳಿತಕ್ಕೆ ವರ್ಷ | ವರಿಷ್ಠರ ಮನಗೆದ್ದ ಕಾಮನ್‌ಮ್ಯಾನ್ ಸಿಎಂ