ಬೆಂಗಳೂರು: ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಕಟು ಸತ್ಯವನ್ನು ಎದುರಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai Vs Siddaramaiah) ಎಚ್ಚರಿಕೆ ನೀಡಿದ್ದಾರೆ. ʻʻಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಸುಳ್ಳು ಹೇಳಿದ್ದಾರೆʼʼ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ʻʻಅರ್ಕಾವತಿ ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರೇ ನೇಮಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗವು ಸುದೀರ್ಘವಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ತನಿಖೆ ನಡೆಸಿದ ವರದಿಯನ್ನು ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ. ಅಧಿಕಾರಿಗಳು ಕಡತ ತಂದರು, ನಾನು ಅನುಮೋದಿಸಿದೆ ಎಂದು ಬರೆದಿರುವುದಾಗಿ ಅವರೇ ಹೇಳಿದ್ದಾರೆ. ಇದರ ಅರ್ಥ, ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ;; ಎಂದರು.
ಕ್ರಮ ತೆಗೆದುಕೊಳ್ಳಲಾಗುವುದು
ʻʻಕೋರ್ಟ್‌ನಲ್ಲಿ ಅಡ್ವೊಕೇಟ್ ಜನರಲ್ ಏನು ವಾದ ಮಾಡಿದ್ದರು ಎನ್ನುವುದು ಮುಖ್ಯವಲ್ಲ. ಅವರ ವಾದದ ನಂತರ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ಎನ್ನುವುದು ಮುಖ್ಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಭ್ರಷ್ಟಾಚಾರವನ್ನು ರಕ್ಷಿಸಲು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನೇ ನಾನು ಹೇಳಿದ್ದು. ತೀರ್ಪು ಹಾಗೂ ಆಯೋಗದ ವರದಿಯನ್ನು ನಾನು ಓದಿದ್ದು. ಈಗಾಗಲೇ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ನಾವು ನೋಡಿದ್ದೇವೆ. ಇನ್ನು ಮುಂದೆ ನಾವೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆʼʼ ಎಂದರು ಬೊಮ್ಮಾಯಿ.
ಸಿಎಂ ಬಸವರಾಜ ಬೊಮ್ಮಾಯಿಯವರು ರಾಜ್ಯ ವಿಧಾನಸಭೆಯಲ್ಲಿ ಗುರುವಾರ ಮಾತನಾಡುತ್ತಾ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಹಲವು ಹಗರಣಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಅದಕ್ಕೆ ಅಲ್ಲೇ ಉತ್ತರ ನೀಡಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಪತ್ರಿಕಾಗೋಷ್ಠಿ ಕರೆದು, ಸಿಎಂ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದಿದ್ದರು.
ಇದನ್ನೂ ಓದಿ : Siddaramaiah: ಸದನದಲ್ಲಿ ನಾನಿಲ್ಲದಿರುವಾಗ ಸಿಎಂ ಆರೋಪ ಮಾಡಿದ್ದಾರೆ: ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ