Site icon Vistara News

Book Reading | ಟಿವಿ ನೋಡಲ್ಲ, ಪುಸ್ತಕ ಬಿಡಲ್ಲ, ಗಣಿನಾಡಿನಲ್ಲೊಬ್ಬ ಪುಸ್ತಕ ತಾತ!

| ಶಶಿಧರ ಮೇಟಿ, ಬಳ್ಳಾರಿ
ಇಲ್ಲೊಬ್ಬ ಪುಸ್ತಕ ತಾತ ಇದ್ದಾರೆ. ವಯಸ್ಸು 92, ಆದರೂ ಕನ್ನಡಕ ಧರಿಸಲ್ಲ. ಓದಿದ್ದು ೭ನೇ ತರಗತಿ, ಇವರಿಗೆ ಪುಸ್ತಕ (Book Reading) ಅಂದರೆ ಬಲು ಪ್ರೀತಿ. ಇವರು ಟಿವಿ ಹತ್ತಿರವೂ ಸುಳಿಯದ ಇವರು ಪುಸ್ತಕವನ್ನು ಅರಸಿ ಹೋಗುತ್ತಾರೆ. ಇವರ ಅಕ್ಷರ ಪ್ರೀತಿ ಇನ್ನೂ ಬತ್ತಿಲ್ಲ. ಸಾಹಿತ್ಯಾಭಿರುಚಿಗೆ ಕೊನೆಯಿಲ್ಲ.

ಬಳ್ಳಾರಿಯ ಮೋಕ ರಸ್ತೆಯ ನಿವಾಸಿಯಾಗಿರುವ ಈ ಪುಸ್ತಕ ತಾತನ ಹೆಸರು ನಂದಿಗೌಡರ ತಿಪ್ಪನಗೌಡ. ಇವರದು ಮೂಲತಃ ಬಳ್ಳಾರಿ ತಾಲೂಕಿನ ಡಿ.ನಾಗೇನಹಳ್ಳಿ. ಇವರು ರೈತರಾಗಿದ್ದು, ಟೈಲರ್‌ ಆಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ಸೇರಿದ ಮೇಲೆ ತಮ್ಮ 75ನೇ ವಯಸ್ಸಿನಲ್ಲಿ ಓದುವ ಅಭ್ಯಾಸ ಮಾಡಿಕೊಂಡು, 17 ವರ್ಷಗಳಿಂದ ಕೈಗೆ ಸಿಕ್ಕ ನೂರಾರು ಪುಸ್ತಕಗಳನ್ನು ಓದಿದ್ದಾರೆ.

ಇವರಿಗಾಗಿ ಗ್ರಂಥಾಲಯ ಚೀಟಿ:

ತಿಪ್ಪನಗೌಡರ ಪುಸ್ತಕ ಪ್ರೀತಿಗೆ ಇವರ ಮನೆಯವರು ಸಾಥ್ ನೀಡಿದ್ದಾರೆ. ಅವರಿಗಾಗಿಯೇ ಗ್ರಂಥಾಲಯದಲ್ಲಿ ಪುಸ್ತಕ ಚೀಟಿ ಮಾಡಿಸಿದ್ದಾರೆ. ಇವರ ಮಗ ಪರ ಊರಿಗೆ, ಧಾರ್ಮಿಕ ಸ್ಥಳಕ್ಕೆ ಹೋದರೆ ಅಲ್ಲಿನ ಚರಿತ್ರೆ ಸೇರಿದಂತೆ ಇತರ ಪುಸ್ತಕಗಳನ್ನು ತಂದು ಕೊಡುತ್ತಾರೆ. ಒಂದು ವೇಳೆ ಗ್ರಂಥಾಲಯದಿಂದ ಪುಸ್ತಕ ತರುವುದು ವಿಳಂಬವಾದರೆ ಸುತ್ತಮುತ್ತ ಮನೆಯವರಿಗೆ ಯಾವುದಾದರೂ ಪುಸ್ತಕ ಇದ್ದರೆ ಕೊಡಿ ಎಂದು ಇವರು ಕೇಳುತ್ತಾರೆ. ಓದಿ ಬಳಿಕ ಅವರಿಗೆ ಹಿಂದಿರುಗಿಸುತ್ತಾರೆ.

ಇವರು ಓದಿರುವ ಪುಸ್ತಕ ಯಾವುವು?

ತಿಪ್ಪನಗೌಡ ಅವರಿಗೆ ಈಗ ಕಿವಿ ಸರಿಯಾಗಿ ಕೇಳುವುದಿಲ್ಲ. ಆದರೆ, ಎಷ್ಟು ಪುಸ್ತಕ ಓದಿದ್ದೀರಿ ಎಂದು ಜೋರಾಗಿ ಕೇಳಿದರೆ, ಭಾರಿ ಪುಸ್ತಕ ಓದಿದ್ದೇನೆ ಎನ್ನುತ್ತಾರೆ. ಅಮರಕೋಶ, ಜೈಮಿನಿ ಭಾರತ, ಸ್ವಾಮಿ ವಿವೇಕಾನಂದರ ಮತ್ತು ಡಾ.ಅಂಬೇಡ್ಕರ್ ಅವರ ಜೀವನ ಚರಿತ್ರೆ, ಭಗವದ್ಗೀತೆ, ಬದಲಾದ ಭಾರತ, ರಾಮಾಯಣ, ಮಹಾಭಾರತ, ಕರ್ನಾಟಕ ಕಥೆ ಹೀಗೆ ಸಾವಿರ ಪುಸ್ತಕಗಳ ಗಡಿ ದಾಟಿದ್ದಾರೆ. ಆದರೆ ಓದುವುದು ಮಾತ್ರ ಇವರ ಕೆಲಸ.

ಇದನ್ನೂ ಓದಿ | Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ

ನಾಲ್ಕು ತಲೆ ಮಾರಿನವರು ಒಂದೇ ಮನೆಯಲ್ಲಿ:

ತಿಪ್ಪನಗೌಡ ಅವರು ತಮ್ಮ ಮನೆಯಲ್ಲಿ ಈಗ ನಾಲ್ಕನೇ ತಲೆಮಾರಿನವರು. ಇವರ ಮಗ ವೀರಭದ್ರಗೌಡ ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರಾಗಿ ನಿವೃತ್ತಿಯಾಗಿದ್ದಾರೆ. ಇನ್ನು ಅವರ ಮೊಮ್ಮಕ್ಕಳಲ್ಲಿ ಒಬ್ಬರು ಬ್ಯಾಂಕಿನ ಉದ್ಯೋಗಿ, ಮತ್ತೊಬ್ಬರು ಖಾಸಗಿ ವೃತ್ತಿಯಲ್ಲಿದ್ದಾರೆ. ನಾಲ್ಕು ಜನ ಮರಿಮೊಮ್ಮಕ್ಕಳು ಓದುತ್ತಿದ್ದಾರೆ.

ಯುವಪೀಳಿಗೆ ಪುಸ್ತಕ ಓದುವುದೆಂದರೆ ಮೂರು ಮಾರು ದೂರ ಸರಿಯುತ್ತಾರೆ. ಆದರೆ, ತಿಪ್ಪನಗೌಡ ಅವರ ಪುಸ್ತಕ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ‌.

ಮಗ ಹೇಳೋದೇನು?
ನಮ್ಮ ತಂದೆಯವರಿಗಾಗಿಯೇ ಲೈಬ್ರರಿಯಲ್ಲಿ ಪುಸ್ತಕ ಚೀಟಿ ಮಾಡಿಸಿದ್ದೇವೆ. ರಾಮಕೃಷ್ಣ ಆಶ್ರಮದಿಂದ ಪುಸ್ತಕ ತಂದು ಕೊಡುತ್ತೇವೆ. ಒಂದು ದಿನವೂ ಪುಸ್ತಕ ಇಲ್ಲದಿದ್ದರೆ ಅವರಿಗೆ ಹೊತ್ತು ಕಳೆಯುವುದಿಲ್ಲ. ಕೊನೆಗೆ ಪಕ್ಕದ ಮನೆಯವರ‌ ಹತ್ತಿರವಾದರೂ ಪುಸ್ತಕ ಕೇಳಿ ಪಡೆದು ಓದುತ್ತಾರೆ. ನನಗೆ ಕನ್ನಡಕವಿದೆ. ಆದರೆ, ನಮ್ಮ ತಂದೆ ಯಾವುದೇ ಕನ್ನಡ ಇಲ್ಲದೆ ಓದುತ್ತಾರೆ ಎಂದು ಪುತ್ರ ವೀರಭದ್ರಗೌಡ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | ಬೈಕಿಂಗ್‌ ಕ್ರೇಜ್‌ ನಿಮಗಿದೆಯಾ? ನೀವು ಓದಲೇಬೇಕಾದ ಐದು ಪುಸ್ತಕಗಳು ಇಲ್ಲಿವೆ

Exit mobile version