Site icon Vistara News

ಎಂಇಎಸ್‌ನಿಂದ ಮತ್ತೆ ಗಡಿ ಕ್ಯಾತೆ; ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಗೆ ಸಿದ್ಧತೆ

ಕರಾಳ

ಬೆಳಗಾವಿ: ನಾಡದ್ರೋಹಿ ಎಂಇಎಸ್ ಮತ್ತೆ ಗಡಿ ಕ್ಯಾತೆ ಆರಂಭವಾಗಿದೆ. ನ.1ರ ಕನ್ನಡ ರಾಜ್ಯೋತ್ಸವ ದಿನವನ್ನು ಕರಾಳ ದಿನಾಚರಣೆಯಾಗಿ ಆಚರಿಸಲು ಸಂಘಟನೆಯ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು, ಜತೆಗೆ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯು ಫೇಸ್‌ಬುಕ್‌ ಸೇರಿ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ‌ ದಿನದ ಪೋಸ್ಟ್‌ಗಳನ್ನು ಹರಿಬಿಟ್ಟಿದ್ದು, ಇವುಗಳು ವೈರಲ್ ಆಗುತ್ತಿವೆ. ಪ್ರತಿ ವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‌ ಪುಂಡಾಟ ನಡೆಸುತ್ತಿದ್ದು, ಈ ಬಾರಿ ಕರಾಳ ದಿನಾಚರಣೆ ಹಾಗೂ ಮಹಾಮೇಳಾವ್‌ ಆಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ | ಕೋಟಿ ಮೀರಿತು ನೋಂದಣಿ: ಕೋಟಿ ಕಂಠ ಗಾಯನಕ್ಕೆ ಅಭೂತಪೂರ್ವ ಸ್ಪಂದನೆ

ಡಿಸೆಂಬರ್‌ನಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಗಡಿ ಖ್ಯಾತೆ ತೆಗೆಯಲು ಎಂಇಎಸ್‌ ಯೋಜನೆ ರೂಪಿಸಿದ್ದು, ಚುನಾವಣೆ ವರ್ಷ ಆಗಿದ್ದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕುತಂತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಎಂಇಎಸ್ ಮಾಜಿ ಶಾಸಕ ಮನೋಹರ ಕಿಣೇಕರ ನೇತೃತ್ವದಲ್ಲಿ ಎಂಇಎಸ್ ಮುಖಂಡರು ಸಭೆ ನಡೆಸಿ, ಕರಾಳ ದಿನಾಚರಣೆ, ಮಹಾಮೇಳಾವ್ ನಡೆಸಲು ತೀರ್ಮಾನಿಸಿದ್ದಾರೆ.

ಪ್ರತಿ ವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‌ ಪುಂಡಾಟದಿಂದ ಭಾಷಾ ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಆದರೆ, ಎಂಇಎಸ್‌ ಪುಂಡರನ್ನು ಗಡಿ ಪಾರು ಮಾಡಲು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಿಂದೇಟು ಹಾಕುತ್ತಿವೆ. ಈ ಬಾರಿಯಾದರೂ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.

ಇದನ್ನೂ ಓದಿ | Mallikarjun Kharge | ಯುವಕರಿಗೆ ಪಕ್ಷದ ಹುದ್ದೆಗಳಲ್ಲಿ ಶೇ.50 ಮೀಸಲು ಜಾರಿ: ಖರ್ಗೆ ಭರವಸೆ

Exit mobile version