ಮುಂಬೈ: ಗುಜರಾತ್ ವಿಧಾನಸಭೆ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿಯು ಮಹಾರಾಷ್ಟ್ರದ ಕೆಲವು ಉದ್ಯಮಗಳನ್ನು ಗುಜರಾತ್‌ಗೆ ಶಿಫ್ಟ್ ಮಾಡಿತ್ತು. ಅದೇ ರೀತಿ, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಬಿಜೆಪಿಯು ಮಹಾರಾಷ್ಟ್ರದ ಹಳ್ಳಿಗಳನ್ನು ಕರ್ನಾಟಕದಲ್ಲಿ ವಿಲೀನ ಮಾಡಬಹುದು ಎಂದು ಶಿವಸೇನೆ(ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ(Border Dispute).
ಮಹಾ ವಿಕಾಸ್ ಅಘಾಡಿ(ಎಂವಿಎ) ನಾಯಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾರಾಷ್ಟ್ರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಈ ಹಿಂದೆ ಮಹಾರಾಷ್ಟ್ರದ ಉದ್ಯಮಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿತ್ತು. ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲಲು ಇದು ಕೂಡ ಕಾರಣವಾಗಿದೆ. ಹಾಗಾಗಿ, ಕರ್ನಾಟಕದಲ್ಲಿ ಎಲೆಕ್ಷನ್ ಗೆಲ್ಲಲು ಮಹಾರಾಷ್ಟ್ರದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲು ಬಿಜೆಪಿ ಹಿಂಜರಿಯದು ಎಂದು ಹೇಳಿದರು.
ಕಳೆದ ಹತ್ತು ದಿನಗಳಿಂದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ- ಮಹಾರಾಷ್ಟ್ರದ ಗಡಿಯಲ್ಲಿ ಗಲಾಟೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಿವಸೇನೆ(ಉದ್ಧವ್ ಬಣ)- ಎನ್‌ಸಿಪಿ- ಕಾಂಗ್ರೆಸ್ ಕೂಟವು ಡಿಸೆಂಬರ್ 17ರಂದು ಮುಂಬೈನಲ್ಲಿ ಬೃಹತ್ ಪ್ರಮಾಣದ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದೆ. ಬಿಜೆಪಿ ಸರ್ಕಾರವು ಮಹಾರಾಷ್ಟ್ರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂಬುದನ್ನು ತೋರಿಸುವ ಪ್ರಯತ್ನಗಳನ್ನು ಪ್ರತಿಪಕ್ಷಗಳು ಮಾಡಲು ಹೊರಟಿವೆ.
ಇದನ್ನೂ ಓದಿ | Border Dispute | ಕರ್ನಾಟಕದಿಂದ ಮಹಾರಾಷ್ಟ್ರದತ್ತ ಹೊರಟ ಸಾರಿಗೆ ಬಸ್; ಇನ್ನೂ ಆರಂಭವಾಗದ ಮಹಾ ಸಂಚಾರ