ಬೆಂಗಳೂರು: ಶುಕ್ರವಾರ ರಾತ್ರಿ ಮಹಾರಾಷ್ಟ್ರದ ನಿಯೋಗವೊಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ವಿವರ ನೀಡಿ ಮಧ್ಯಪ್ರವೇಶ ಕೋರಿದ ಬೆನ್ನಲ್ಲೇ ಕರ್ನಾಟಕವೂ ಸಿಡಿದೆದ್ದಿದ್ದು, ತುರ್ತು ಕ್ರಮಗಳನ್ನು ಕೈಗೊಂಡಿದೆ. ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ಕೇಂದ್ರ ಅಲ್ಲೇ ಪರಿಹಾರವಾಗಲಿ ಎಂದು ರಾಜ್ಯ ಸರಕಾರ ಸುಮ್ಮನಿತ್ತು. ಆದರೆ, ಯಾವಾಗ ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರವನ್ನು ಓಲೈಸಿಕೊಳ್ಳಲು ಮುಂದಾದರೋ ಕರ್ನಾಟಕವೂ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಎಲ್ಲಾ ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ನೀಡಿದ್ದೇನೆ. ಸೋಮವಾರದಂದು ನಮ್ಮ ರಾಜ್ಯದ ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿ, ವಿವರವನ್ನು ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್ 14 ಅಥವಾ 15 ರಂದು ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ʻʻಸೋಮವಾರದಂದು ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ. ನಾನೂ ಕೂಡ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಹೇಳಿ ಕಳಿಸಿದಾಗ ಬರಬೇಕಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದ ವಿಚಾರ, ನಿಲುವು, ವಾಸ್ತವಾಂಶವನ್ನು ಈಗಾಗಲೇ ತಿಳಿಸಲಾಗಿದೆ. ಹಲವಾರು ವಿವರಗಳನ್ನು ಸಹ ನೀಡಲಾಗಿದೆ. ಭೇಟಿಯಾದ ಸಂದರ್ಭದಲ್ಲಿ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದುʼʼ ಎಂದು ಹೇಳಿದರು.
ಸರ್ವ ಪಕ್ಷದ ಸಭೆ
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಎಲ್ಲ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಾಗುವುದಾಗಿ ತಿಳಿಸಿದ ಅವರು, ಸರ್ವ ಪಕ್ಷದ ಸಭೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಸಭೆ ನಿಗದಿಯಾದ ಕೂಡಲೇ ತಿಳಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರ ವಿಕಾಸ ಅಘಾಡಿ ನಿಯೋಗ ಭೇಟಿ
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್-ಎನ್‌ಸಿಪಿ ಮತ್ತು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಿಯೋಗವೊಂದು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯವೂ ಪ್ರತಿ ತಂತ್ರ ಹೆಣೆಯಲು ಮುಂದಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ʻʻ ಮಹಾರಾಷ್ಟ್ರದ ನಾಯಕರು ಹಿಂದೆಯೂ ಹಲವು ಬಾರಿ ಇಂಥ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಆದರೆ, ಅದರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಯಾಕೆಂದರೆ, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ವಾದ ಪ್ರಖರವಾಗಿರಲಿರಲಿದೆ. ಜತೆಗೆ ನ್ಯಾಯ ಕರ್ನಾಟಕದ ಪರವಾಗಿ ಇರಲಿದೆ ಎಂದಿದ್ದಾರೆ.
ಇದನ್ನೂ ಓದಿ | Border Dispute | ಶಾ ಜತೆ ಶಿವಸೇನೆ, ಎನ್‌ಸಿಪಿ ಚರ್ಚೆಗೆ ಬೊಮ್ಮಾಯಿ ತಿರುಮಂತ್ರ, ಶೀಘ್ರವೇ ಕೇಂದ್ರ ಸಚಿವರ ಭೇಟಿಗೆ ಸಿಎಂ ತೀರ್ಮಾನ