Site icon Vistara News

Border dispute |‌ ಗಡಿ ವಿವಾದವನ್ನು ಅನಗತ್ಯವಾಗಿ ಉದ್ರೇಕಿಸಿದರೆ ಅಪಾಯ: ಫಡ್ನವಿಸ್‌ಗೆ ಬುದ್ಧಿವಾದ ಹೇಳಿದ ಬೊಮ್ಮಾಯಿ

Devendra Phadnavis Bommai

ಬೆಂಗಳೂರು: ಗಡಿ ವಿವಾದವನ್ನು ಅನಗತ್ಯವಾಗಿ ಉದ್ರೇಕಗೊಳಿಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಮಂಗಳವಾರ ಬೆಳಗಾವಿಯ ಹಿರೇಬಾಗೇವಾಡಿ ಬಳಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿ ಹೊಂದಿದ ಕೆಲವು ಲಾರಿಗಳಿಗೆ ಹಾನಿಯುಂಟು ಮಾಡಿದ ಬಳಿಕ ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಬೊಮ್ಮಾಯಿ ಅವರು ಮಹಾರಾಷ್ಟ್ರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು.

ಮಂಗಳವಾರ ಬೆಳಗಾವಿಯಲ್ಲಿ ಮಹಾರಾಷ್ಟ್ರ ನೋಂದಣಿಯ ಕೆಲವು ಲಾರಿಗಳಿಗೆ ಹಾನಿಯುಂಟು ಮಾಡಲಾಗಿತ್ತು, ಅದಾದ ಬಳಿಕ ಪುಣೆಯಲ್ಲಿ ಕರ್ನಾಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯುವ ಕೆಲಸ ನಡೆಸಿದೆ. ಈ ಎರಡೂ ವಿಚಾರಗಳನ್ನು ಬೊಮ್ಮಾಯಿ ಅವರು ಪ್ರಸ್ತಾಪಿಸಿ ವಿವಾದವನ್ನು ಅನಗತ್ಯವಾಗಿ ಪ್ರಚೋದಿಸುವುದರಿಂದ ಎರಡೂ ರಾಜ್ಯಗಳ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ವಿವರಿಸಿದರು.

ಡಿಸಿಎಂ ಫಡ್ನವಿಸ್‌ ಅವರು ಮಹಾರಾಷ್ಟ್ರದ ಲಾರಿಗಳಿಗೆ ಆಗಿರುವ ಹಾನಿಯನ್ನು ಪ್ರಸ್ತಾಪಿಸಿದಾಗ ವಿವಾದದ ಮೂಲವನ್ನು ಪ್ರಸ್ತಾಪಿಸಿದ ಬೊಮ್ಮಾಯಿ ಅವರು, ರಾಜಕೀಯ ನಾಯಕರು ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಿದರೆ ಅದರ ಪರಿಣಾಮ ಗಡಿಭಾಗದ ಜನರಿಗೆ ತೊಂದರೆಯಾಗುತ್ತದೆ ಎಂದು ನೆನಪಿಸಿದರು.

ವಿವಾದವೇ ಇಲ್ಲದ, ಈಗಾಗಲೇ ಮುಗಿದುಹೋಗಿರುವ ಗಡಿ ವಿಚಾರವನ್ನು ಸುಪ್ರೀಂಕೋರ್ಟ್‌ನಲ್ಲಿ ದಾವೆಯ ಮೂಲಕ ಪ್ರಶ್ನಿಸಿದ ಮಹಾರಾಷ್ಟ್ರ ಸರಕಾರದ ನಿಲುವನ್ನು ಬೊಮ್ಮಾಯಿ ಪ್ರಶ್ನಿಸಿದರು. ಜತೆಗೆ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿರುವಾಗ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಲು ಹಠ ಹಿಡಿದದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಗಳನ್ನು ಪ್ರಸ್ತಾಪಿಸಿದರು. ಇಂಥ ವಿದ್ಯಮಾನಗಳಿಂದ ಎರಡು ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧ ಹದಗೆಡುವುದಲ್ಲದೆ, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ ಎಂದು ವಿವರಿಸಿದರು.

ಅಂತಿಮವಾಗಿ ಎರಡೂ ರಾಜ್ಯಗಳು ಕನ್ನಡಿಗರು ಮತ್ತು ಮರಾಠಿಗರ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಒಪ್ಪಿಕೊಂಡರು. ಉಭಯ ರಾಜ್ಯಗಳು ಕಾನೂನಿನ ಚೌಕಟ್ಟಿನಲ್ಲೇ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇದನ್ನೂ ಓದಿ | Border Dispute | ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಕರ್ನಾಟಕಕ್ಕೆ ಶರದ್ ಪವಾರ್ ವಾರ್ನಿಂಗ್

Exit mobile version