Site icon Vistara News

Border dispute | ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಆದೀತು: ಬೊಮ್ಮಾಯಿ ಎಚ್ಚರಿಕೆ

CM Basavaraja bommai

ಹುಬ್ಬಳ್ಳಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ (Border dispute) ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಎರಡೂ ರಾಜ್ಯಗಳಲ್ಲಿ ಗಡಿ ವಿವಾದದ ಕಿಚ್ಚು ಜೋರಾಗಿದೆ. ಈ ಹೊತ್ತಿನಲ್ಲಿ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಬರುವುದು ಬೇಡ ಎಂಬ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.

ಡಿಸೆಂಬರ್‌ ಆರರಂದು ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದಾರೆ. ಈ ಭೇಟಿ ಸರಿಯಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೇಳಿದರು.

ʻʻಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುವುದು ಬೇಡ. ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಿದ್ದಾರೆ. ಈಗಿರುವ ವಾತಾವರಣದಲ್ಲಿ ಸಚಿವರು ಬರುವುದು ಬೇಡ, ಇಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತದೆ. ಹೀಗಾಗಿ ಬರುವುದು ಉಚಿತವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆʼʼ ಎಂದು ಬೊಮ್ಮಾಯಿ ಹೇಳಿದರು.

ʻʻಸಚಿವರು ಈ ಸಂದರ್ಭದಲ್ಲಿ ಬಂದೇ ಬರುತ್ತೇವೆ ಎಂದು ಹೇಳುವುದು ಸರಿಯಾದ ಕ್ರಮ ಅಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ನಡುವೆ ಸಾಮರಸ್ಯ ಇದೆ. ಇಗ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಹೊತ್ತಿನಲ್ಲಿ ಬರುವುದು ಬೇಡʼʼ ಎಂದರು ಬೊಮ್ಮಾಯಿ.

ʻʻಕರ್ನಾಟಕದ ಪ್ರಕಾರ ಗಡಿ ವಿವಾದ ಮುಗಿದು ಹೋಗಿರೋ ಅಧ್ಯಾಯ. ಆದರೆ, ಮಹಾರಾಷ್ಟ್ರ ಪದೇಪದೆ ಖ್ಯಾತೆ ತೆಗೆಯುತ್ತಿದೆ. ಈಗ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿಗೆ ಬರುವ ಸಾಹಸ ಮಾಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆʼʼ ಎಂದರು.

ಸಚಿವರ ಭೇಟಿ ವಿರುದ್ಧ ಪ್ರತಿಬಂಧಕ ಕಾಯ್ದೆ ಜಾರಿ ಮಾಡುವ ವಿಚಾರದ ಬಗ್ಗೆ ಕೇಳಿದಾಗ, ʻʻಹಿಂದೆ ಈ ತರಹ ಆದಾಗಲೆಲ್ಲ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೋ ಅಂಥಹುದೇ ಕ್ರಮ ಕೈಗೊಳ್ತೀವಿʼʼ ಎಂದರು.

ಕೇಸರಿ ಶಾಲೆ ಚರ್ಚೆ ಮಾಡಲ್ಲ ಎಂದರು
ಈ ನಡುವೆ, ರಾಜ್ಯದಲ್ಲಿ ಕೇಸರಿ ಶಾಲೆ ಆರಂಭಿಸಬೇಕು ಎಂಬ ಬೇಡಿಕೆಯ ಬಗ್ಗೆ ಕೇಳಿದಾಗ, ʻʻನಾನು ಈ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋದರ ಬಗ್ಗೆ ನಮ್ಮ ಗಮನ ಇದೆʼʼ ಎಂದರು.

ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ರಾಜ್ಯದ ಒಂದಿಂಚು ಜಾಗವನ್ನೂ ಬಿಡಲ್ಲ, ಫಡ್ನವಿಸ್‌ಗೆ ಬೊಮ್ಮಾಯಿ ತಿರುಗೇಟು

Exit mobile version