ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಬೆಳಗಾವಿ ಗಡಿ ವಿವಾದವು(Border Dispute) ಭುಗಿಲೆದ್ದಿದ್ದು, ರಾಜಕೀಯ ನಾಯಕರ ಆರೋಪ ಮತ್ತು ಪ್ರತ್ಯಾರೋಪಗಳು ಜೋರಾಗಿವೆ. ಶಿವಸೇನೆ(ಉದ್ಧವ್ ಠಾಕ್ರೆ) ನಾಯಕ ಸಂಜಯ್ ರಾವತ್, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ, ‘ದಿಲ್ಲಿಯ ಸಪೋರ್ಟ್’ ಇಲ್ಲದೇ ಗಡಿಯಲ್ಲಿ ಹಿಂಸಾಚಾರ ನಡೆಯಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಅಶಕ್ತವಾಗಿದೆ. ಎಲ್ಲ ಕಡೆಯಿಂದಲೂ ವೈಫಲ್ಯವನ್ನು ಕಾಣುತ್ತಿದೆ. ಪ್ರತಿ ದಾಳಿಯನ್ನು ನಡೆಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜತೆಗೇ ಮಹಾರಾಷ್ಟ್ರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈವರೆಗೂ ಕರ್ನಾಟಕದ ಯಾವುದೇ ಮುಖ್ಯಮಂತ್ರಿಯು ಸೋಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿರಲಿಲ್ಲ ಎಂದು ರಾವತ್ ಹೇಳಿದ್ದಾರೆ.
ರಾವತ್ ಹೇಳಿಕೆಗೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವನಕುಳೆ ಅವರು, ಆಧಾರ ಇಲ್ಲದೇ ಆರೋಪ ಮಾಡಬಾರದು. ಹಾಗೆಯೇ ಗಡಿ ವಿಷಯದಲ್ಲಿ ರಾವತ್ ಜನರನ್ನು ಉದ್ರೇಕಿಸಬಾರದು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಎರಡು ರಾಜ್ಯಗಳ ಗಡಿಯಲ್ಲಿ ಪ್ರತಿಭಟನೆ, ಗಲಾಟೆಗಳು ಮುಂದುವರಿದಿವೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸಿಎಂ ಬೊಮ್ಮಾಯಿ ಹೇಳಿಕೆಗೆ ಮಹಾ ಮಾಜಿ ಸಿಎಂ ಉದ್ಧವ್ ಆಕ್ರೋಶ