Site icon Vistara News

Border Dispute | ಮುಂದುವರಿದ ಮಹಾಕ್ಯಾತೆ; ಬೊಮ್ಮಾಯಿ ವಿರುದ್ಧ ಪ್ರಧಾನಿ ಮೋದಿಗೆ ಮಾನೆ ಸುಳ್ಳು ದೂರು!

Border Dispute

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಸಂಬಂಧ ಮಹಾರಾಷ್ಟ್ರ ನಾಯಕರ ಕ್ಯಾತೆ ಮುಂದುವರಿದಿದೆ. ಗಡಿ ವಿವಾದ ಬಗೆಹರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಸ್ಥಿಕೆ ಆಯ್ತು, ಈಗ ಪ್ರಧಾನಿ ನರೇಂದ್ರ ಮೋದಿಗೂ ಮಹಾರಾಷ್ಟ್ರ ನಾಯಕರೊಬ್ಬರು ಮನವಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸುಳ್ಳು ದೂರು ಸಲ್ಲಿಸಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಮಧ್ಯಸ್ಥಿಕೆ‌ ವಹಿಸಿ, ಸುಪ್ರೀಂ ಕೋರ್ಟ್ ತೀರ್ಪು ಬರುವ ತನಕ ಯಥಾಸ್ಥಿತಿ ಕಾಪಾಡುವಂತೆಯೂ ಕಿವಿ ಮಾತು ಹೇಳಿದ್ದರು. ಯಾವುದೇ ಪ್ರದೇಶಕ್ಕೂ ಬೇಡಿಕೆ ಇಡಬಾರದೂ ಎಂದೂ ಉಭಯ ರಾಜ್ಯಗಳ ಸಿಎಂಗಳಿಗೆ ತಾಕೀತು ಮಾಡಿದ್ದರು. ಆದರೆ, ಮಹಾರಾಷ್ಟ್ರ ನಾಯಕರು ಮಾತ್ರ ಶಾ ಸೂಚನೆ ಪಾಲಿಸದೇ ಕ್ಯಾತೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | Karnataka Election | ಕೋಲಾರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯಿಸಿದ ಮಹಿಳೆಯರು

ಜನ್ಮದಿನದ ನೆಪವೊಡ್ಡಿ ನವ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಮಾನೆ ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದ್ದಾರೆ. ಡಿ.14ರಂದು ಗೃಹಮಂತ್ರಿ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿದರು. ಅದರಂತೆಯೇ ನಾವು ನಡೆದುಕೊಂಡಿದ್ದೇವೆ‌. ಆದರೆ ಕರ್ನಾಟಕದ ಸಿಎಂ ಬೊಮ್ಮಾಯಿ ಅವರೇ ಸಭೆಯ ನಿಯಮ ಉಲ್ಲಂಘಿಸಿದ್ದಾರೆ. ನಾನು ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷನಾಗಿದ್ದರಿಂದ ಅಲ್ಲಿನ ಮರಾಠಿ ಜನರ ಅಳಲು ಕೇಳಲು ಡಿ.19ರಂದು ಬೆಳಗಾವಿಗೆ ಹೊರಟಿದ್ದೆ. ಆದರೆ, ನನ್ನ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಕರ್ನಾಟಕದ ಸಿಎಂ ಒಕ್ಕೂಟ ವ್ಯವಸ್ಥೆಯನ್ನೂ ಧಿಕ್ಕರಿಸಿದ್ದಾರೆ. ಗಡಿ ಭಾಗದಲ್ಲಿ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ, ತಾವು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು. ಮರಾಠಿಗರಿಗೆ ನ್ಯಾಯ ಒದಗಿಸಬೇಕು ಎಂದೂ ಪ್ರಧಾನಿಗೆ ನೀಡಿದ ಮನವಿಯಲ್ಲಿ ಮಾನೆ ಕೋರಿದ್ದಾರೆ.

ಇತಿಹಾಸದಲ್ಲೇ ಮೊದಲ ಬಾರಿ ಬೆಳಗಾವಿಯಲ್ಲಿ ಡಿ.೧೯ರಂದು ನಾಡದ್ರೋಹಿ ಎಂಇಎಸ್ ನಡೆಸುತ್ತಿದ್ದ ಮಹಾಮೇಳಾವ್‌ಗೆ ಜಿಲ್ಲಾಡಳಿತ ಬ್ರೇಕ್ ಹಾಕಿತ್ತು. ಈ ಮಧ್ಯೆ ಎಡಿಜಿಪಿ ಅಲೋಕ್‌ಕುಮಾರ್, ಎಂಇಎಸ್, ಕನ್ನಡಪರ ಮುಖಂಡರ ಒಟ್ಟಿಗೆ ಕೂರಿಸಿ ಬುದ್ಧಿಮಾತು ಹೇಳಿದ್ದರು. ಟಿಳಕವಾಡಿ ಠಾಣೆಯಲ್ಲಿ ಅಲೋಕ್‌ ಕುಮಾರ್, ಎಂಇಎಸ್ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಬೆಳಗಾವಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ‌ ಮಾಡಿದ್ದರು.

ಇದನ್ನೂ ಓದಿ | Karnataka Election | ರಾಜಕೀಯ ಬದ್ಧ ವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

Exit mobile version