ಮುಂಬೈ: ಬೆಳಗಾವಿ ಗಡಿ ವಿವಾದಕ್ಕೆ (Border Dispute) ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಎನ್‌ಸಿಪಿ ನಾಯಕ ಶರದ್ ಪವಾರ್ (Sharad Pawar) ಅವರು, ”ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ,” ಎಂದು ಕರ್ನಾಟಕಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ”ಮುಂದಿನ 24 ಗಂಟೆಯೊಳಗೆ ಪರಿಸ್ಥಿತಿ ಸುಧಾರಿಸದಿದ್ದರೆ ಸಂಭವಿಸುವ ಯಾವುದೇ ಅಹಿತಕರ ಘಟನೆಗಳಿಗೆ ಕೇಂದ್ರ ಹಾಗೂ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರವೇ ಹೊಣೆಯನ್ನು ಹೊರಬೇಕಾಗುತ್ತದೆ,” ಎಂದು ಆವಾಜ್ ಹಾಕಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಜನರ ತಾಳ್ಮೆಯನ್ನು ಪರೀಕ್ಷಿಸಲು ಹೋಗಬೇಡಿ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಸಲಹೆ ನೀಡಿದ್ದಾರೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಗಟ್ಟಿ ನಿರ್ಧಾರವನ್ನು ಕೈಗೊಳ್ಳುವ ಸಮಯ ಈಗ ಎದುರಾಗಿದೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶೀಘ್ರದಲ್ಲೇ ಸಂಸತ್ ಅಧಿವೇಶನ ಶುರುವಾಗಲಿದ್ದು, ಎಲ್ಲ ಸಂಸದರು ಒಗ್ಗಾಟ್ಟಾಗಿ ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಕಳೆದ ಕೆಲವು ವಾರಗಳಿಂದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ದೇಶಪೂರ್ವಕವಾಗಿಯೇ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುವ ಪ್ರಯತ್ನವನ್ನು ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿದ್ದಾರೆ. ಈಗ ಗಡಿಯಲ್ಲಿ ಭಯಭೀತ ವಾತಾವರಣವಿದೆ ಎಂದು ಪವಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ರಾಜ್ಯದ ಒಂದಿಂಚು ಜಾಗವನ್ನೂ ಬಿಡಲ್ಲ, ಫಡ್ನವಿಸ್‌ಗೆ ಬೊಮ್ಮಾಯಿ ತಿರುಗೇಟು