Site icon Vistara News

Border Dispute | ಕರವೇ ಅಧ್ಯಕ್ಷರಿಗೆ ಬೆಳಗಾವಿ ಪ್ರವೇಶ ನಿಷೇಧ: ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಸಂಘರ್ಷ ಸ್ಥಿತಿ

ಕರವೇ ನಾಯಕರು ಬೆಳಗಾವಿ ಕಡೆಗೆ

ಬೆಳಗಾವಿ: ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಹಲವು ಕರ್ನಾಟಕದ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡೇ ಸಿದ್ಧ (Border dispute) ಎಂಬ ಮಹಾರಾಷ್ಟ್ರ ನಾಯಕರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್‌ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆ ಒಡ್ಡಲಾಗಿದೆ. ಅವರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ ಬಳಿ ತಡೆಯಲು ಪೊಲೀಸರು ಸಜ್ಜಾಗಿದ್ದು, ಈ ಕಾರಣದಿಂದ ಟೋಲ್‌ ಗೇಟ್‌ ಬಳಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.

ಮಹಾರಾಷ್ಟ್ರದ ಇಬ್ಬರು ಸಚಿವರು ಮಂಗಳವಾರ ಬೆಳಗಾವಿಗೆ ಬರುವ ಕಾರ್ಯಕ್ರಮವಿತ್ತು. ಇಲ್ಲಿ ನಡೆಯಲಿರುವ ಪರಿನಿರ್ವಾಣ ದಿನದಲ್ಲಿ ಭಾಗವಹಿಸಲು ಅವರು ಬರುವವರಿದ್ದರು. ಆದರೆ, ಗಡಿ ವಿವಾದ ಉತ್ತುಂಗದಲ್ಲಿರುವ ಕಾಲದಲ್ಲಿ ಅವರ ಆಗಮನದಿಂದ ಶಾಂತಿ ಸುವ್ಯವಸ್ಥೆಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರಕಾರವೇ ಅವರನ್ನು ಆಗಮಿಸದಂತೆ ಮನವಿ ಮಾಡಿತ್ತು. ಒಂದೊಮ್ಮೆ ಇದನ್ನು ಧಿಕ್ಕರಿಸಿ ಅವರು ಬಂದರೂ ಗಡಿಯಲ್ಲೇ ತಡೆಯುವ ನಿಟ್ಟಿನಲ್ಲಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ. ಜತೆಗೆ ಜಿಲ್ಲೆಯನ್ನು ಮಹಾರಾಷ್ಟ್ರ ಭಾಗದಿಂದ ಪ್ರವೇಶಿರುವ ಎಲ್ಲ ಮಾರ್ಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಹಿರೇಬಾಗೇವಾಡಿ ಟೋಲ್‌ ಗೇಟ್‌ನಲ್ಲಿ ಬಿಗಿ ಬಂದೋಬಸ್ತ್‌

ಈ ನಡುವೆ, ಬೆಳಗಾವಿಯಲ್ಲಿ ಎಂಇಎಸ್‌ ಪುಂಡರು ಹಿಂಸಾಚಾರ ಮಾಡಬಹುದು ಎಂಬ ಗುಮಾನಿಯಲ್ಲಿ ಎಲ್ಲ ಕಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಇದರ ನಡುವೆಯೇ ಕರವೇ ಬೆಳಗಾವಿಯಲ್ಲೇ ದೊಡ್ಡ ಮಟ್ಟದ ಪ್ರತಿಭಟನಾ ಸಭೆ ನಡೆಸಲು ಮುಂದಾಗಿತ್ತು. ಮಹಾರಾಷ್ಟ್ರ ಸಚಿವರ ಹೇಳಿಕೆಗಳು, ಎಂಇಎಸ್‌ ಪುಂಡಾಟದ ವಿರುದ್ದ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿತ್ತು.

ಆದರೆ, ಒಂದು ಕಡೆ ಮಹಾರಾಷ್ಟ್ರ ನಾಯಕರ ಭೇಟಿಯ ಬಿಸಿ, ಇನ್ನೊಂದು ಕಡೆ ಎಂಇಎಸ್‌ ಪುಂಡರ ಕಿರಿಕಿಯ ಗುಮಾನಿಯ ನಡುವೆ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾದೀತು ಎಂಬ ಕಾರಣಕ್ಕೆ ಬಹಿರಂಗ ಸಭೆಗೆ ಅವಕಾಶ ನೀಡಿರಲಿಲ್ಲ. ಆದರೆ, ಪ್ರವೇಶಕ್ಕೆ ಅವಕಾಶ ನೀಡಲೇಬೇಕು ಎಂದು ಕರವೇ ಕಾರ್ಯಕರ್ತರು ಪಟ್ಟುಹಿಡಿದಿದ್ದಾರೆ.

ಟೋಲ್‌ಗೇಟ್‌ನಲ್ಲಿ ಬಿಗಿ ಬಂದೋಬಸ್ತ್‌
ಕರವೇ ಕಾರ್ಯಕರ್ತರು, ರಾಜ್ಯಾಧ್ಯಕ್ಷ ನಾರಾಯಣ ಗೌಡರು ಬೆಳಗಾವಿ ನಗರ ಪ್ರವೇಶಿಸುವುದನ್ನು ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ 400ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರೇ ಸಾರಥ್ಯ ವಹಿಸಿದ್ದಾರೆ. ಇಬ್ಬರು ಡಿಸಿಪಿ ನಾಲ್ಕು ಜನ ಡಿಸಿಪಿ, ಹತ್ತು ಜನ ಪಿಐ ಹನ್ನೊಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಕಾರ್ಯಕರ್ತರನ್ನು ಇಲ್ಲೇ ವಶಕ್ಕೆ ಪಡೆಯಲು ವ್ಯವಸ್ಥೆಗಳನ್ನು ಮಾಡಲಾಗಿದೆ.

12 ಕೆ ಎಸ್ ಆರ್ ಪಿ, 8 ಸಿಎಆರ್ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಅಶ್ರುವಾಯು ಪ್ರಯೋಗಿಸುವ ವರುಣ ವಾಹನ, ರ‌್ಯಾಪಿಡ್ ಇಂಟ್ರವರ್ಷನ್ ವೆಹಿಕಲ್ ತಂದಿಡಲಾಗಿದೆ.

ಕರವೇ ನಾಯಕರ ಆಕ್ರೋಶ
ಬಹಿರಂಗ ಸಭೆ ನಡೆಸಲು ಅವಕಾಶ ಕೋರಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಒಂದು ವೇಳೆ ಬೆಳಗಾವಿ ನಗರ ಪ್ರವೇಶಕ್ಕೆ ಅವಕಾಶ ನೀಡದಿದೇ ಇದ್ದರೆ ಬೇರೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಕರವೇ ಮುಖಂಡರು ಎಚ್ಚರಿಸಿದ್ದಾರೆ.

ʻʻಮಹಾರಾಷ್ಟ್ರ ರಾಜಕಾರಣಿಗಳಿಗೆ ಎಂಇಎಸ್ ಮಹಾಮೇಳಾವ್‌ದಲ್ಲಿ ಭಾಗಿಯಾಗಲು ಅವಕಾಶ ನೀಡುತ್ತಾರೆ. ಕನ್ನಡಿಗರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದರೆ ಏನರ್ಥʼʼ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಹೇಳಿಕೆ ನೀಡಿದ್ದಾರೆ.

ಜಮಾಯಿಸುತ್ತಿರುವ ಕಾರ್ಯಕರ್ತರು
ಕರವೇ ಅಧ್ಯಕ್ಷ ನಾರಾಯಣ ಗೌಡ ನಡೆ ಬೆಳಗಾವಿ ಕಡೆ ಅಭಿಯಾನದ ಭಾಗವಾಗಿ ದೊಡ್ಡ ಸಂಖ್ಯೆಯಲ್ಲಿ ಬೆಳಗಾವಿ ಕಡೆ ಕಾರ್ಯಕರ್ತರು ಆಗಮಿಸುತ್ತಿರುವುದು ಕಂಡುಬರುತ್ತಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಕರವೇ ಕಾರ್ಯಕರ್ತರು ಜಮಾಯಿಸಿದ್ದಾರೆ. ಇತ್ತ ಸುಮಾರು 150ಕ್ಕೂ ಹೆಚ್ಚು ವಾಹನಗಳಲ್ಲಿ ಬೆಳಗಾವಿ ಕಡೆ ಕರವೇ ಕಾರ್ಯಕರ್ತರ ದಂಡು ಟೋಲ್‌ಗೇಟ್‌ ಕಡೆಗೆ ಸಾಗುತ್ತಿದೆ.

ಪೊಲೀಸರು ಹೇಳುವುದೇನು?
ಹಿರೇಬಾಗೇವಾಡಿಯಲ್ಲಿ ಮುಖಂಡರ ಜೊತೆಗೆ ಚರ್ಚೆ ನಡೆಸುತ್ತೇವೆ. ಬಳಿಕ ನಗರ ಪ್ರವೇಶಕ್ಕೆ ಅನುಮತಿ ಕೋಡಬೇಕೋ? ಬೇಡವೋ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದೂ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Border dispute | ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದು, ಇಂದು ʻಕರವೇ ನಡಿಗೆ ಬೆಳಗಾವಿ ಕಡೆಗೆ’

Exit mobile version