ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರ ಬೆಳಗಾವಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ (Border dispute). ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ತೀವ್ರ ಪ್ರತಿಭಟನೆಗೆ ಇಳಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮಹಾರಾಷ್ಟ್ರದ ಸಚಿವರ ಹೇಳಿಕೆ ಮತ್ತು ಎಂಇಎಸ್ ಕಾರ್ಯಕರ್ತರ ಪುಂಡಾಟದ ವಿರುದ್ಧ ಬೆಳಗಾವಿ ಚೆನ್ನಮ್ಮ ಸರ್ಕಲ್‌ನಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿತ್ತು. ಅದರೆ, ಪೊಲೀಸ್ ಇಲಾಖೆ ಇದಕ್ಕೆ ಅವಕಾಶ ನಿರಾಕರಿಸಿತ್ತು. ಹೀಗಾಗಿ ಬೆಂಗಳೂರು ಮತ್ತು ಇತರ ಭಾಗಗಳಿಂದ ಬೆಳಗಾವಿಗೆ ಆಗಮಿಸಿದ ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿಯ ಟೋಲ್ ಗೇಟ್‌ನಲ್ಲಿ ತಡೆಯಲಾಗಿತ್ತು.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ದೊಡ್ಡ ತಂಡದೊಂದಿಗೆ ಆಗಮಿಸಿದಾಗ ಅವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಯಿತು. ಅವರನ್ನು ಅಲ್ಲೇ ತಡೆದಾಗ ಸಿಟ್ಟಿಗೆದ್ದ ಕರವೇ ಕಾರ್ಯಕರ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ದಾಂಧಲೆಗಿಳಿದರು.
ಹೆದ್ದಾರಿಯಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಅವುಗಳ ಮೇಲೆ ಕನ್ನಡದ ಧ್ವಜವನ್ನೂ ಹಾರಿಸಿದರು. ಜತೆಗೆ ಮಹಾರಾಷ್ಟ್ರ ನೋಂದಣಿ ಲಾರಿಗಳಿಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಹತ್ತಕ್ಕೂ ಹೆಚ್ಚು ಲಾರಿಗಳ ಗಾಜು ಪುಡಿಗಟ್ಟಲಾಗಿದೆ.
ಎಲ್ಲ ಕಾರ್ಯಕರ್ತರ ಬಂಧನ
ಈ ನಡುವೆ ಪೊಲೀಸರು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ಬಂಧಿಸಿದರು. ಈ ನಡುವೆ ಉಳಿದ ಕಾರ್ಯಕರ್ತರ ಆಕ್ರೋಶವೂ ಮುಂದುವರಿದಿದೆ.
ಇದನ್ನೂ ಓದಿ | Border Dispute | ಕರವೇ ಅಧ್ಯಕ್ಷರಿಗೆ ಬೆಳಗಾವಿ ಪ್ರವೇಶ ನಿಷೇಧ: ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಸಂಘರ್ಷ ಸ್ಥಿತಿ