ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ (Border Dispute) ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಮರಾಠಿಗರ ಪುಂಡಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಇಲ್ಲಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದೆ. ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಆಕ್ರೋಶ ಹೊರಹಾಕಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆದಿದ್ದು, ಬೆಳಗಾವಿಯ ಮಹಾಂತೇಶ ನಗರ ಬಳಿಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಮಹಾರಾಷ್ಟ್ರ ಪುಂಡರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಆ ರಾಜ್ಯದ ರಾಜಕೀಯ ನಾಯಕರ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ.
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕೃತಿಗಳ ಅಣಕು ಮೆರವಣಿಗೆಯನ್ನು ಮಾಡಿರುವ ಕರವೇ ಕಾರ್ಯಕರ್ತರು ಗಡಿ ವಿವಾದದಲ್ಲಿ ತಕ್ಷಣವೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ | Border Dispute | ʼಮಹಾʼ ಗಡಿ ದಾವೆಗೆ ಮಾನ್ಯತೆ ಇಲ್ಲ; ಕಾನೂನು ಹೋರಾಟಕ್ಕೆ ಸಿದ್ಧತೆ, ರಾಜ್ಯದಿಂದ ಸಮರ್ಥ ವಾದ: ಸಿಎಂ ಬೊಮ್ಮಾಯಿ
ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ರಾಷ್ಟ್ರೀಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪುಣೆಯಿಂದ-ಬೆಂಗಳೂರಿಗೆ ಹೊರಟಿರುವ ಪ್ರಯಾಣಿಕರು ತೀವ್ರ ಪರದಾಟವನ್ನು ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಎಂಇಎಸ್ ನಿಷೇಧಕ್ಕೆ ಆಗ್ರಹ
ಬೆಳಗಾವಿಯಲ್ಲಿ ಎಂಇಎಸ್ ನಿಷೇಧ ಮಾಡಬೇಕು. ಅವರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕನ್ನಡ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧ ಮಾಡಿ ಆದೇಶವನ್ನು ಹೊರಡಿಸಬೇಕು. ಈ ಬಾರಿ ಚುನಾವಣೆಯಲ್ಲಿ ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಕನ್ನಡ ಹಾಗೂ ಕನ್ನಡಿಗರ ಪರ ನಿಲ್ಲುವ ರಾಜಕಾರಣಿಗಳಿಗೆ ಮಾತ್ರ ಮತ ಹಾಕುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಕರವೇ ಮುಖಂಡರು ಹೇಳಿದ್ದಾರೆ.
ಶಿಂಧೆ, ಫಡ್ನವಿಸ್ ಭಾವಚಿತ್ರಕ್ಕೆ ಮಸಿ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಭಾವಚಿತ್ರಕ್ಕೆ ಕಪ್ಪು ಮಸಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಪಾಸಿಂಗ್ ಇರುವ ವಾಹನಕ್ಕೆ ಕಪ್ಪು ಮಸಿ ಹಚ್ಚಲು ಯತ್ನ ಮಾಡಿದ್ದು, ಪೊಲೀಸರು ತಡೆದಿದ್ದಾರೆ. ಆಗ ಪೊಲೀಸರು ಹೋರಾಟಗಾರ ಮಧ್ಯೆ ನೂಕುನುಗ್ಗಲು ಉಂಟಾಗಿದೆ.
ಗೂಡ್ಸ್ ವಾಹನ ಧ್ವಂಸಕ್ಕೆ ಯತ್ನ
ಮಹಾರಾಷ್ಟ್ರದ ಗೂಡ್ಸ್ ವಾಹನ ದ್ವಂಸಕ್ಕೆ ಕರವೇ ಕಾರ್ಯಕರ್ತರು ಯತ್ನ ಮಾಡಿದ್ದು, ಆ ವಾಹನದ ವೈಪರ್ ಮುರಿದು ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನಾಕಾರರನ್ನು ಹೆದ್ದಾರಿ ಮೇಲಿಂದ ಸರ್ವಿಸ್ ರಸ್ತೆಗೆ ಕರೆತಂದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಮಹಾರಾಷ್ಟ್ರ ವಾಹನಗಳನ್ನು ಕಳುಹಿಸಿಕೊಡಲಾಯಿತು.
ಇದನ್ನೂ ಓದಿ | Tulunadu Daivaradhane | ದೈವಾರಾಧನೆ ಹೆಸರಲ್ಲಿ ದಂಧೆ; ದೈವಾರಾಧಕರಿಂದ ಕೊರಗಜ್ಜನಿಗೆ ದೂರು