ಬೆಂಗಳೂರು: ಗಡಿ ಕ್ಯಾತೆ ತೆಗೆಯುತ್ತ ಎರಡೂ ರಾಜ್ಯಗಳ ನಡುವೆ ಸಂಘರ್ಷ ಉಂಟುಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಯೋಜನೆಗಳನ್ನು ಕರ್ನಾಟಕದ ನೆಲದಲ್ಲಿ ಅನುಷ್ಠಾನ ಮಾಡುವ ವಿವಾದಾತ್ಮಕ ಹಾಗೂ ಪ್ರಚೋದನಾತ್ಮಕ ತೀರ್ಮಾನ ಕೈಗೊಂಡಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯನ್ನು ಕರ್ನಾಟಕದ 865 ಹಳ್ಳಿಗಳಲ್ಲೂ ಜಾರಿ ಮಾಡಲು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರ ಕೈಗೊಂಡಿದೆ
ಈ ಕುರಿತು ಸಿಎಂ ಶಿಂಧೆ ಅಧ್ಯಕ್ಷತೆಯ ಸಂಪುಟ ಸಮಿತಿಯು ಇತ್ತೀಚೆಗೆ ತೀರ್ಮಾನ ಮಾಡಿದೆ. ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ಹೇಳುತ್ತಿರುವ 865 ಹಳ್ಳಿಗಳಲ್ಲೂ ಈ ಯೋಜನೆ ಜಾರಿ ಮಾಡಬೇಕು. ಇದಕ್ಕಾಗಿ ತಗಲುವ 54 ಕೋಟಿ ರೂ. ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರ ಭರಿಸಲಿದೆ ಎಂದು ತೀರ್ಮಾನ ಕೈಗೊಂಡಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸರ್ಕಾರದ ಹಿರಿಯ ಸಚಿವರೊಬ್ಬರು, ಕರ್ನಾಟಕದ ನಿಯಂತ್ರಣದಲ್ಲಿರುವ 865 ಹಳ್ಳಿಗಳ ಮರಾಠಿ ಭಾಷಿಕ ಹಾಗೂ ಮರಾಠಿ ಭಾಷಿಕರಲ್ಲದ ಜನರಿಗೆ ಆರೋಗ್ಯವನ್ನು ಕಲ್ಪಿಸಲು ನಾವು ವೆಚ್ಚವನ್ನು ಭರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರ ಇತರೆ ಯೋಜನೆಗಳನ್ನೂ ಇಲ್ಲಿ ಜಾರಿ ಮಾಡಲಾಗುತ್ತದೆ ಎಂದಿದ್ದಾರೆ.
ಮಹಾಜನ್ ವರದಿಯನ್ನು ಒಪ್ಪಿಕೊಳ್ಳದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮಹಾರಾಷ್ಟ್ರ ಸರ್ಕಾರ ಆಗಾಗ್ಗೆ ಸಂಗರ್ಷ ಉಂಟುಮಾಡುತ್ತಿರುತ್ತದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್‌ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸಭೆ ನಡೆಸಿದ್ದರು. ಅಲ್ಲಿ ವಿವಾದ ತಣ್ಣಗಾಯಿತು ಎನ್ನುವ ವೇಳೆಗೆ ಮಹಾರಾಷ್ಟ್ರ ಸರ್ಕಾರ ಹೊಸ ವರಸೆ ತೆಗೆದಿದೆ. ಕರ್ನಾಟಕದ ಅನುಮತಿಯಿಲ್ಲದೆ ತನ್ನ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.