ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಹಾಗೂ ಬೆಳಗಾವಿಯ ನಾಡದ್ರೋಹಿ ಎಂಇಎಸ್ ಮಾಡುತ್ತಿದೆ. ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ್ ಭೇಟಿ ಈಗ ಅಧಿಕೃತವಾಗಿದೆ. ಈ ಸಂಬಂಧ ಅವರ ಪ್ರವಾಸ ಪಟ್ಟಿಯು ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ರವಾನೆಯಾಗಿದೆ.
ನಾಡದ್ರೋಹಿ ಎಂಇಎಸ್ ಮನವಿ ಮೇರೆಗೆ ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಅವರು ಡಿಸೆಂಬರ್ 3ರ ಬೆಳಗ್ಗೆ 11 ಗಂಟೆಗೆ ಬೆಳಗಾವಿಗೆ ಆಗಮಿಸಲಿದ್ದಾರೆ. ಈ ವೇಳೆ ಬೆಳಗಾವಿ ಹಾಗೂ ಗಡಿಭಾಗದ ಗ್ರಾಮಗಳಲ್ಲಿ ಸರಣಿ ಸಭೆ ನಡೆಸಲಿದ್ದಾರೆ.
ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಮರಾಠಿ ಭಾಷಿಕರ ಕುಟುಂಬಸ್ಥರನ್ನು ಚಂದ್ರಕಾಂತ ಪಾಟೀಲ್ ಭೇಟಿಯಾಗಲಿದ್ದಾರೆ. ಈ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆಂದು ಕನ್ನಡಪರ ಸಂಘಟನೆಗಳು ಆಕ್ರೋಶವನ್ನು ಹೊರಹಾಕಿವೆ.
ಇದನ್ನೂ ಓದಿ | Border Dispute | ಎಂಇಎಸ್ ಪುಂಡರು, ಇನ್ಯಾವುದೇ ಎಸ್ ಪುಂಡರೇ ಇರಲಿ, ತರ್ಲೆ ಮಾಡಿದ್ರೆ ಕಠಿಣ ಕ್ರಮ: ಅಲೋಕ್ ಕುಮಾರ್
ಶಿವಾಜಿ ಉದ್ಯಾನವನಕ್ಕೆ ಭೇಟಿ
ಡಿ. 3ರ ಬೆಳಗ್ಗೆ 11 ಗಂಟೆಗೆ ಬೆಳಗಾವಿಗೆ ಭೇಟಿ ನೀಡಲಿರುವ ಚಂದ್ರಕಾಂತ ಪಾಟೀಲ್, ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಗಡಿ ಹೋರಾಟ ವೇಳೆ ಗಲಭೆ ಸೃಷ್ಟಿಸಿ ಮೃತಪಟ್ಟವರ ಸ್ಮರಣಾರ್ಥ ಹಿಂಡಲಗಾ ಗ್ರಾಮದ ಬಳಿ ನಿರ್ಮಿಸಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಲಿದ್ದಾರೆ.
ಅಂದು ಬೆಳಗ್ಗೆ 11.35ಕ್ಕೆ ಬೆಳಗಾವಿಯ ಎಂಇಎಸ್ ಕಚೇರಿಗೆ ಭೇಟಿ ನೀಡಲಿರುವ ಚಂದ್ರಕಾಂತ ಪಾಟೀಲ್, ಎಂಇಎಸ್ ಕಾರ್ಯಕರ್ತರ ಜತೆ ಮಾತುಕತೆ ನಡೆಸಲಿದ್ದಾರೆ. ಬೆಳಗ್ಗೆ 11.55ಕ್ಕೆ ತುಕಾರಾಮ ಮಹಾರಾಜ ಸಾಂಸ್ಕೃತಿಕ ಕಾರ್ಯಾಲಯಕ್ಕೆ ಭೇಟಿ ನೀಡಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಎಂಇಎಸ್ ಮುಖಂಡ ಪ್ರಕಾಶ್ ಮರಗಾಳೆ ನಿವಾಸಕ್ಕೆ ಭೇಟಿ ಮಾಡುವ ಬಗ್ಗೆ ಪ್ರವಾಸ ವೇಳಾಪಟ್ಟಿಯಲ್ಲಿ ಪ್ರಕಟ ಮಾಡಲಾಗಿದೆ. ಅಲ್ಲಿಂದ ಗಡಿ ಹೋರಾಟದಲ್ಲಿ ಮೃತಪಟ್ಟ ಮಧು ಬಾಂದೇಕರ್, ವಿದ್ಯಾ ಶಿಂಧೋಳಕರ್ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬದವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಎಲ್ಲೆಲ್ಲಿ ಸಭೆ?
ಮಧ್ಯಾಹ್ನ 3.15ರ ನಂತರ ಹಳೇ ಬೆಳಗಾವಿಯಲ್ಲಿ ಸಂಚಾರ ಮಾಡುವ ಚಂದ್ರಕಾಂತ ಪಾಟೀಲ್, ಸಂಜೆ 6 ಗಂಟೆಯವರೆಗೂ ಗಡಿ ಭಾಗದ ಗ್ರಾಮಗಳಲ್ಲಿ ಸರಣಿ ಸಭೆಯನ್ನು ನಡೆಸಲಿದ್ದಾರೆ. ಸುಳಗಾ, ಉಚಗಾಂವ, ಬೆಳಗುಂದಿ, ಹಿಂಡಲಗಾದ ವಿಜಯನಗರ, ಕಂಗ್ರಾಳಿ ಕೆಎಚ್ ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. 6 ಗಂಟೆಗೆ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ | Ramesh Jarakiholi | ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಖಚಿತವೇ?; ಸಿ.ಎಂ. ಇಬ್ರಾಹಿಂ ಕೊಟ್ಟ ಸುಳಿವೇನು?
ಪ್ರವೇಶ ನಿರಾಕರಣೆಗೆ ಕರವೇ ಮನವಿ
ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರಾದ ಚಂದ್ರಕಾಂತ ಪಾಟೀಲ್ ಹಾಗೂ ಶಂಭುರಾಜ ದೇಸಾಯಿ ಅವರ ಭೇಟಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಕರವೇ ಮನವಿ ಮಾಡಿದೆ.
ಕರವೇ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ, ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಮಹಾರಾಷ್ಟ್ರ ಸಚಿವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಯನ್ನು ಪ್ರವೇಶ ಮಾಡಬಾರದು ಎಂದು ಒತ್ತಾಯಪಡಿಸಿದ್ದಾರೆ.
ಒಂದು ವೇಳೆ ಸಚಿವರು ಬೆಳಗಾವಿಗೆ ಬಂದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಅವರು ಬೆಳಗಾವಿಯಲ್ಲಿ ನಡೆಸುವ ಸಭೆಗೆ ನುಗ್ಗಿ ಅಡ್ಡಿಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 2ರಂದು ಬೆಳಗಾವಿ ಜಿಲ್ಲೆ ರಾಮದುರ್ಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನೂ ಸಹ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಹೇಳಿದರು.
ಇದನ್ನೂ ಓದಿ | Border Dispute | ಮರಾಠಿಗರ ಪುಂಡಾಟ ಖಂಡಿಸಿ ವಿವಿಧೆಡೆ ಕರವೇ ಪ್ರತಿಭಟನೆ; ಗೋಕಾಕ್‌ನಲ್ಲಿ ಹೆದ್ದಾರಿ ತಡೆ