Site icon Vistara News

Border dispute | ಕರ್ನಾಟಕದ ಎಚ್ಚರಿಕೆಗೆ ಮಣಿದ ಮಹಾರಾಷ್ಟ್ರ: ಸಚಿವರ ಬೆಳಗಾವಿ ಭೇಟಿ ರದ್ದು, ಫಡ್ನವಿಸ್‌ ಹೇಳಿದ್ದೇನು?

border-dispute-advocates profession charges

ಬೆಳಗಾವಿ: ಡಿಸೆಂಬರ್‌ ಆರರಂದು ಬೆಳಗಾವಿಗೆ ಭೇಟಿ ನೀಡಿಯೇ ಸಿದ್ಧ ಎಂದು ಸವಾಲು ಹಾಕಿದಂತೆ ಮಾತನಾಡಿದ್ದ ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರ ಭೇಟಿ ರದ್ದಾಗುವ (Border dispute) ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ಕಾರಣಕ್ಕೂ ಈ ಪರಿಸ್ಥಿತಿಯಲ್ಲಿ ಬೆಳಗಾವಿಗೆ ಬರುವ ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಜತೆಗೆ ಮುಖ್ಯ ಕಾರ್ಯದರ್ಶಿಗಳ ಮೂಲಕವೂ ಅಲ್ಲಿನ ಸರಕಾರಕ್ಕೆ ಸಂದೇಶ ರವಾನಿಸಲಾಗಿತ್ತು. ಇದರ ನಡುವೆಯೇ ಒಂದೊಮ್ಮೆ ಸಚಿವರು ಆಗಮಿಸಿದರೆ ಅವರನ್ನು ಗಡಿಯಲ್ಲೇ ತಡೆಯುವ ಬಗ್ಗೆಯೂ ಪೊಲೀಸ್‌ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು ಎನ್ನಲಾಗಿದೆ. ಎಲ್ಲ ವಿಚಾರಗಳನ್ನು ಗಮನಿಸಿಕೊಂಡು ಮಹಾರಾಷ್ಟ್ರದ ಸಚಿವರು ಬೆಳಗಾವಿ ಭೇಟಿಗೆ ಹಿಂದೇಟು ಹಾಕಿದ್ದಾರೆ ಎಂದು ಹೇ:ಳಲಾಗಿದೆ.

ಮಹಾರಾಷ್ಟ್ರ ಸರಕಾರದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರ ಬೆಳಗಾವಿ ಭೇಟಿ ರದ್ದತಿಯ ಪರೋಕ್ಷ ಸುಳಿವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರು ನೀಡಿದ್ದಾರೆ.
ʻʻಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಬಗ್ಗೆ ಸಿಎಂ ಏಕನಾಥ ಶಿಂಧೆ ನಿರ್ಧರಿಸುತ್ತಾರೆʼʼ ಎಂದು ಮುಂಬೈನಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದರು.

ʻʻಗಡಿ ವಿವಾದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಆಗಲಿ ಮಹಾರಾಷ್ಟ್ರ ಆಗಲಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಏನೇ ನಿರ್ಣಯ ಕೈಗೊಳ್ಳಬೇಕಿದ್ದರೂ ಸುಪ್ರೀಂಕೋರ್ಟೇ ತೀರ್ಮಾನ ಮಾಡಬೇಕು. ಈ ಸಂದರ್ಭದಲ್ಲಿ ಯಾವುದೇ ಹೊಸ ವಿವಾದ ಸೃಷ್ಟಿಸುವುದು ಯೋಗ್ಯವಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆʼʼ ಎಂದು ಫಡ್ನವಿಸ್‌ ಹೇಳಿದ್ದಾರೆ.

ʻʻನಾಳೆ ಮಹಾಪರಿನಿರ್ವಾಹಣ ದಿನದ ನಿಮಿತ್ತ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲಿದ್ದರು. ಸಚಿವರು ಕೈಗೊಂಡ ನಿರ್ಣಯ ಯಾರೂ ತಡೆಯಲು ಸಾಧ್ಯವಿಲ್ಲ. ಆದ್ರೆ ಮಹಾಪರಿನಿರ್ವಾಹಣ ದಿನ ನಾವು ಈ ರೀತಿ ವಾದ ಸೃಷ್ಟಿಸೋದು ಸರಿನಾ? ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಸಿಎಂ ಏಕನಾಥ ಶಿಂಧೆ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆʼʼ ಎಂದರು ದೇವೇಂದ್ರ ಫಡ್ನವಿಸ್‌.

ʻʻಮಹಾಪರಿನಿರ್ವಾಹಣ ದಿನ ಅತ್ಯಂತ ಮಹತ್ವದ್ದು. ಅಂದು ಯಾವುದೇ ಅಹಿತಕರ ಘಟನೆ ಆಗಬಾರದು. ಈ ದಿನ ಯಾವುದೇ ಪ್ರತಿಭಟನೆ ಆಗುವುದು ಯೋಗ್ಯವಲ್ಲʼʼ ಎಂದಿರುವ ಫಡ್ನವಿಸ್‌ ಅವರು, ʻʻಭವಿಷ್ಯದಲ್ಲಿ ನಾವು ಬೆಳಗಾವಿಗೆ ಹೋಗೋದನ್ನು ಯಾರೂ ತಡೆಯಲಾಗಲ್ಲ. ಇದು ಸ್ವತಂತ್ರ ಭಾರತ. ದೇಶದ ಯಾವುದೇ ಪ್ರದೇಶಕ್ಕೆ ಹೋಗಲು ಯಾರದೇ ಅನುಮತಿ ಬೇಕಿಲ್ಲ. ಯಾರೂ ಯಾರನ್ನೂ ತಡೆಯಲು ಆಗುವುದಿಲ್ಲʼʼ ಎಂದರು ಇದೇ ಸಂದರ್ಭದಲ್ಲಿ ದೇವೇಂದ್ರ ಫಡ್ನವಿಸ್‌ ಹೇಳಿದರು.

ಗಡಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದ ಜಿಲ್ಲಾಧಿಕಾರಿ
ಈ ನಡುವೆ, ಡಿಸೆಂಬರ್‌ ಆರರಂದು ಮಹಾರಾಷ್ಟ್ರದ ಸಚಿವರು, ಸಂಸದರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂಬ ಕನ್ನಡಪರ ಸಂಘಟನೆಗಳ ಮನವಿ ಸ್ವೀಕರಿಸಿದ ಮೇಲೆ ಮಾತನಾಡಿದ ಅವರು, ಮಹಾರಾಷ್ಟ್ರದ ಇಬ್ಬರು ಸಚಿವರು, ಒಬ್ಬರು ಸಂಸದರ ಪ್ರವಾಸ ಪಟ್ಟಿ ಬಂದಿದೆ. ಈ ಹಿಂದೆ ಡಿ. 3ಕ್ಕೆ ಬರುತ್ತೇವೆ ಅಂದಿದ್ದರು, ಬಳಿಕ ಡಿ.6ಕ್ಕೆ ಮುಂದೂಡಿದರುʼʼ ಎಂದು ವಿವರಿಸಿದರು.

ʻʻಒಂದೊಮ್ಮೆ ಸಚಿವರು ಮತ್ತು ಸಂಸದರು ಬೆಳಗಾವಿಗೆ ಭೇಟಿ ನೀಡಿದರೆ ಪರಿಸ್ಥಿತಿ ತುಂಬಾ ಬಿಗಡಾಯಿಸುವ ಸಾಧ್ಯತೆಗಳಿವೆ. ಕಾನೂನು ಸುವ್ಯವಸ್ಥೆ ಹಾಳಾಗುವುದು ಮಾತ್ರವಲ್ಲದೆ, ಅವರ ಸುರಕ್ಷತೆಗೂ ಸಮಸ್ಯೆ ಇದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಹೀಗಾಗಿ ಸಚಿವರೇ ತಮ್ಮ ಭೇಟಿಯನ್ನು ರದ್ದು ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಒಂದು ವೇಳೆ ಅವರಾಗಿ ಅವರೇ ವಾಪಸ್‌ ಪಡೆಯದಿದ್ದರೆ ನಾವೇ ಗಡಿಯಲ್ಲಿ ತಡೆಯುತ್ತೇವೆʼʼ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ʻʻಈ ಹಿಂದೊಮ್ಮೆ ಹೀಗೇ ಆದೇಶ ಹೊರಡಿಸಿ ಗಡಿಯಲ್ಲಿ ತಡೆದಿದ್ದೆವು. ಅದೇ ರೀತಿ ಈ ಬಾರಿಯೂ ಐಪಿಸಿ ಸೆಕ್ಷನ್ 143 ಪ್ರಕಾರ ಪ್ರತಿಬಂಧಕಾ ಕಾಯ್ದೆ ಹೊರಡಿಸುತ್ತೇವೆ. ಒಂದು ವೇಳೆ ಗಡಿ ಪ್ರವೇಶಕ್ಕೆ ಅವಕಾಶ ನೀಡಿದ್ರೆ ತೊಂದರೆ ಆಗುತ್ತೆ ಹೀಗಾಗಿ ಅವಕಾಶ ನೀಡುವುದಿಲ್ಲʼʼ ಎಂದರು.

ʻʻಬೆಳಗಾವಿಯ ಎಲ್ಲಾ ಗಡಿಭಾಗದಲ್ಲಿಯೂ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆʼʼ ಎಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಮಹಾರಾಷ್ಟ್ರದ ಸಚಿವರ ಬೆಳಗಾವಿ ಭೇಟಿ ಪ್ರಸ್ತಾಪದ ವಿರುದ್ಧ ಬೆಳಗಾವಿಯಲ್ಲಿ ಸೋಮವಾರ ಕನ್ನಡ ಪರ ಸಂಘಟನಗಳು ಪ್ರತಿಭಟನೆ ನಡೆಸಿದವು. ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಉರಳು ಸೇವೆ ಮಾಡಿದ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿರುವ ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಎಂಇಎಸ್‌ಗೆ ಕುಮ್ಮಕ್ಕು ಕೊಡ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರಾಣ ಕೊಡ್ತೀವಿ ಆದರೆ ಬೆಳಗಾವಿ ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ | Border dispute | ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಆದೀತು: ಬೊಮ್ಮಾಯಿ ಎಚ್ಚರಿಕೆ

Exit mobile version