Site icon Vistara News

Border Dispute | ಮಹಾಮೇಳಾವ್‌ಗಾಗಿ ಬೆಳಗಾವಿಗೆ ಬರಲಿದ್ದ ಮಹಾ ಸಂಸದನಿಗೆ ಗಡಿ ಪ್ರವೇಶ ನಿಷೇಧ: ಡಿಸಿ ಖಡಕ್‌ ಆದೇಶ

maharashtra mane ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಧೈರ್ಯಶೀಲ್‌ ಮಾನೆ ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿ: ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸೋಮವಾರ (ಡಿ.೧೯) ನಡೆಯಲಿರುವ ಮಹಾಮೇಳಾವ್ ಕಾರ್ಯಕ್ರಮಕ್ಕೆ ಭಾಗವಹಿಸಲು ಮುಂದಾಗಿದ್ದ ಮಹಾರಾಷ್ಟ್ರ ಗಡಿ ವಿವಾದ (Border Dispute) ಉನ್ನತ ಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ್ ಮಾನೆ ಅವರ ಬೆಳಗಾವಿ ಗಡಿ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಬೇಕು, ಅಲ್ಲಿಯವರೆಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಗೃಹ ಸಚಿವ ಅಮಿತ್‌ ಷಾ ಸೂಚನೆ ನೀಡಿರುವ ಮಧ್ಯೆಯೂ ಮಹಾರಾಷ್ಟ್ರ ಸರ್ಕಾರ ತನ್ನ ಮೂಗು ತೂರಿಸುವ ಛಾಳಿಯನ್ನು ಬಿಡದೇ ಮಹಾರಾಷ್ಟ್ರ ಗಡಿ ವಿವಾದ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ್ ಮಾನೆಯನ್ನು ಬೆಳಗಾವಿಯಲ್ಲಿ ಡಿ. ೧೯ರಂದು ನಡೆಯಲಿರುವ ಮಹಾ ಮೇಳಾವ್‌ಗೆ ಕಳುಹಿಸಲು ನಿರ್ಧರಿಸಿತ್ತು. ಇದು ರಾಜ್ಯದ ಶಾಂತಿ-ಸೌಹಾರ್ಧತೆಗೆ ಧಕ್ಕೆಯುಂಟು ಮಾಡಲಿದೆ ಎಂಬ ಕಾರಣಕ್ಕೆ ಸಿಎಆರ್‌ಪಿಸಿ 1973 ಕಲಂ 144(3)ರ ಅನ್ವಯ ಪ್ರದತ್ತ ಅಧಿಕಾರ ಬಳಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಮಾನೆ ಬೆಳಗಾವಿ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಎಂಇಎಸ್ ಆಯೋಜಿಸಿರುವ ಮಹಾಮೇಳಾವ್‌ದಲ್ಲಿ ಪಾಲ್ಗೊಳ್ಳಲು ಮಾನೆ ಸೋಮವಾರ ಬೆಳಗಾವಿಗೆ ಆಗಮಿಸುವವರಿದ್ದರು. ಈ ಸಂಬಂಧ ತಮ್ಮ ಪ್ರವಾಸ ಪಟ್ಟಿಯನ್ನು ಬೆಳಗಾವಿ ಪೊಲೀಸರಿಗೆ ರವಾನಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ಈ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ | Border Dispute | ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಸಂಸದರ ಆಗಮನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಭಾಷಾ ವೈಷಮ್ಯ ಬೆಳೆದು ಗಲಾಟೆಗಳು ಆಗಬಹುದಾಗಿದೆ. ಅಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗುವ ಸಮಸ್ಯೆಯೂ ತಲೆದೋರಬಹುದು, ಸಾರ್ವಜನಿಕರ ನೆಮ್ಮದಿ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಗಡಿಯನ್ನು ಮಾನೆ ಪ್ರವೇಶಿಸದಂತೆ ನಿರ್ಬಂಧಿತ ಆದೇಶವನ್ನು ಹೊರಡಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಪಿಯಿಂದ ವರದಿ ಪಡೆದಿದ್ದ ಡಿಸಿ
ಬೆಳಗಾವಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಭೇಟಿ ನಿರ್ಧಾರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಬೆಳಗಾವಿ ನಗರ ಪೊಲೀಸ್ ಕಮಿಷನರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಂದ ವರದಿ ಕೇಳಿದ್ದರು. ಉಭಯ ಅಧಿಕಾರಿಗಳ ವರದಿ ಆಧರಿಸಿ ಜಿಲ್ಲಾಧಿಕಾರಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ವೈ ಕೆಟಗರಿ ಭದ್ರತೆ ಕೇಳಿದ್ದ ಮಾನೆ
ಡಿಸೆಂಬರ್‌ ೧೯ರ ಸೋಮವಾರ ಮಹಾಮೇಳಾವ್‌ ಹಿನ್ನೆಲೆಯಲ್ಲಿ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಹೀಗಾಗಿ ನನಗೆ ವೈ ಕೆಟಗೆರಿ ಭದ್ರತೆಯನ್ನು ನೀಡಿ ಎಂದು ಮಹಾರಾಷ್ಟ್ರ ಸಂಸದ ಮಾನೆ ಬೆಳಗಾವಿ ಪೊಲೀಸರಿಗೆ ಮನವಿ ಮಾಡಿದ್ದರು. ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಎಂಇಎಸ್‌ ಆಯೋಜನೆ ಮಾಡಿದ್ದ ಮಹಾಮೇಳಾವ್ ಕಾರ್ಯಕ್ರಮಕ್ಕಾಗಿ ಬೆಳಗ್ಗೆ 11.30ಕ್ಕೆ ಆಗಮಿಸಲಿದ್ದ ಮಾನೆ, ಅಂದು ಮಧ್ಯಾಹ್ನ 1.30ಕ್ಕೆ ವಾಪಸ್‌ ತೆರಳಲಿದ್ದಾರೆ ಎಂದು ಪ್ರವಾಸ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಕಾಂಗ್ರೆಸನ್ನು ಹಿಂದುತ್ವದ ಚಕ್ರವ್ಯೂಹದಲ್ಲಿ ಸಿಲುಕಿಸಲು ಬಿಜೆಪಿ ತಯಾರಿ; ಸಾವರ್ಕರ್‌ ಭಾವಚಿತ್ರದಿಂದ ಆರಂಭ

Exit mobile version