ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಕುರಿತಂತೆ ಮಹಾಜನ ಆಯೋಗದ ವರದಿಯೇ ಅಂತಿಮ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವಂಥದ್ದು ಏನೂ ಇಲ್ಲ. ಇದು ಅವರೇ ಹೇಳಿ ಕೇಂದ್ರದಿಂದ ಮಾಡಿಸಿದ್ದ ಆಯೋಗವಾಗಿದೆ. ಆ ಆಯೋಗ ಕೊಟ್ಟಿರುವ ವರದಿಯನ್ನು ಮಹಾರಾಷ್ಟ್ರದವರೂ ಒಪ್ಪಬೇಕು. ಅದಾಗದಿದ್ದರೆ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾಜನ್ ಆಯೋಗದ ವರದಿಯನ್ನು ಎಲ್ಲರೂ ಒಪ್ಪಬೇಕಿದೆ. ಭಾಷಾವಾರು ಪ್ರದೇಶಗಳ ಆಧಾರದ ಮೇಲೆ ಈ ಪ್ರಾಂತ್ಯಗಳ ಪುನರ್ ವಿಂಗಡಣೆ ಆಗಿದೆ. ಮಹಾರಾಷ್ಟ್ರದವರ ಒತ್ತಾಯದ ಮೇಲೆಯೇ ಕೇಂದ್ರ ಸರ್ಕಾರ ಮಹಾಜನ್ ಆಯೋಗವನ್ನು ರಚನೆ ಮಾಡಿತ್ತು. ಮಹಾಜನ್ ಅವರು ಏನು ವರದಿ ಕೊಟ್ಟಿದ್ದಾರೋ ಅದನ್ನು ಒಪ್ಪಿಕೊಳ್ಳುವ ಧರ್ಮ ಮಹಾರಾಷ್ಟ್ರ, ಕರ್ನಾಟಕ, ಗೋವಾ ಹಾಗೂ ಕೇರಳದ್ದೂ ಆಗಿದೆ ಎಂದು ಹೇಳಿದರು.
ಅಂದು ಅವರೇ ಒತ್ತಾಯ ಮಾಡಿ ಮಹಾಜನ್ ಆಯೋಗವನ್ನು ರಚನೆ ಮಾಡಿಸಿಕೊಂಡಿದ್ದರು. ಕೊನೆಗೆ ಅವರು ಕೊಟ್ಟ ವರದಿಯಲ್ಲಿ ಉಲ್ಟಾ ಬರೆಯಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಮಹಾಜನ್ ಆಯೋಗಕ್ಕೆ ಮಾಡಿರುವಂತಹ ಅಪಮಾನವಾಗಿದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ | Border Dispute | ಮಹಾ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ, ಎಂಇಎಸ್ ಬ್ಯಾನ್‌ಗೆ ಆಗ್ರಹ; ಶಿಂಧೆ, ಫಡ್ನವಿಸ್ ಪ್ರತಿಕೃತಿ ದಹನ
ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿ ೪೨ ಹಳ್ಳಿಗಳಿದ್ದು, ಅಲ್ಲಿನ ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ನಿರ್ಣಯ ಮಾಡಿದ್ದಾರೆ. ಇದಕ್ಕೆ ಮಹಾಜನ್ ಆಯೋಗದ ವರದಿಯೇ ಕಾರಣವಾಗಿದೆ. ವರದಿ ಕೊಟ್ಟ ನಂತರ ದಕ್ಷಿಣ ಸೋಲಾಪುರ, ಅಕ್ಕಲಕೋಟ, ಜತ್ತ ತಾಲೂಕು ಭಾಗಗಳ ಅಭಿವೃದ್ಧಿಯನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿಲ್ಲ. ಅವರನ್ನು ಸಂಪೂರ್ಣವಾಗಿ ಮೂರನೇ ದರ್ಜೆ ನಾಗರಿಕರಂತೆ ಅಲ್ಲಿನ ಸರ್ಕಾರ ನೋಡುತ್ತಿದೆ. ಇದನ್ನು ಬಿಟ್ಟು ಸೂಕ್ತ ಸೌಕರ್ಯ ನೀಡಲಿ ಎಂದು ಆಗ್ರಹಿಸಿದರು.
ಜತ್ತ ತಾಲೂಕಿನ ಜನ ಕರ್ನಾಟಕಕ್ಕೆ ಸೇರ್ಪಡೆಯಾಗುವುದಾದರೆ ನಮ್ಮ ಅಭ್ಯಂತರ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ವಿಶೇಷವಾಗಿ ಅರ್ಥೈಸಬಾರದು. ಅವರು ಅಲ್ಲಿನ ಜನರ ಭಾವನೆ ಆಧಾರದ ಮೇಲೆ ಮಾತನಾಡಿದ್ದಾರೆ. ಅವರೇ ಕರ್ನಾಟಕಕ್ಕೆ ಸೇರ್ಪಡೆಯಾಗುವ ನಿರ್ಣಯ ತೆಗೆದುಕೊಂಡಿದ್ದಾರೆ. ಅವರಿಗೆ ನಾವು ಯಾವುದೇ ರೀತಿಯ ಒತ್ತಾಯ ಮಾಡಿಲ್ಲ ಎಂದು ಹೇಳಿದರು.
ಎಂಇಎಸ್‌ನ ಕೆಲವರು ಗಡಿ ವಿಷಯವನ್ನಿಟ್ಟುಕೊಂಡೇ ಅಧಿಕಾರ ಹಿಡಿದಿದ್ದಾರೆ. ಆದರೆ, ಇವುಗಳನ್ನು ನಿಭಾಯಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಬೆಳಗಾವಿಯಲ್ಲಿ ಗೆಲ್ಲುತ್ತಿಲ್ಲ ಎಂದು ಯತ್ನಾಳ ಹೇಳಿದರು.
ಇದನ್ನೂ ಓದಿ | Border Dispute | ʼಮಹಾʼ ಗಡಿ ದಾವೆಗೆ ಮಾನ್ಯತೆ ಇಲ್ಲ; ಕಾನೂನು ಹೋರಾಟಕ್ಕೆ ಸಿದ್ಧತೆ, ರಾಜ್ಯದಿಂದ ಸಮರ್ಥ ವಾದ: ಸಿಎಂ ಬೊಮ್ಮಾಯಿ